ಚೆನ್ನೈ: ಸತತ ಟೆಸ್ಟ್ ಸರಣಿ ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್ ತಂಡದ ನಾಯಕ ಅಲೆಸ್ಟರ್ ಕುಕ್ ರಾಜೀನಾಮೆ ಕೊಡಬೇಕೆಂದು ಎಲ್ಲೆಡೆಯಿಂದ ಒತ್ತಡ ಬರುತ್ತಿದೆ. ಆದರೆ ಕುಕ್ ಮಾತ್ರ ರಾಜೀನಾಮೆ ಕೊಡಲು ಇದು ತಕ್ಕ ಸಮಯವಲ್ಲ ಎಂದು ಕುರ್ಚಿಗೆ ಅಂಟಿ ಕುಳಿತಿದ್ದಾರೆ.
“ಸದ್ಯಕ್ಕೆ ನಾಯಕತ್ವ ತ್ಯಜಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಯ ಸರಿಯಾಗಿಲ್ಲ. ಇಂಗ್ಲೆಂಡ್ ಹೋದ ಮೇಲೆ ಕ್ರಿಸ್ ಮಸ್ ಹಬ್ಬ ಆಚರಿಸಬೇಕು. ಸ್ವಲ್ಪ ವಿಶ್ರಾಂತಿ ಪಡೆದ ನಂತರ ಇಂಗ್ಲೆಂಡ್ ಕ್ರಿಕೆಟ್ ಅಧ್ಯಕ್ಷ ಆಂಡ್ರ್ಯೂ ಸ್ಟ್ರಾಸ್ ಜತೆಗೆ ಚರ್ಚಿಸಿ ಇಂಗ್ಲೆಂಡ್ ಕ್ರಿಕೆಟ್ ಗೆ ಏನು ಬೇಕು ಎಂದು ನಿರ್ಧರಿಸುತ್ತೇನೆ” ಎಂದು ಕುಕ್ ಹೇಳಿದ್ದಾರೆ.
ಆದರೆ ಮಾಜಿ ಆಟಗಾರರಾದ ಜೆಫ್ರಿ ಬಾಯ್ಕಾಟ್, ನಾಸಿರ್ ಹುಸೇನ್ ಕುಕ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮುಂದಿನ ಆಷಸ್ ಸರಣಿಗೆ ಮೊದಲು ತಂಡವನ್ನು ಹದಗೊಳಿಸಲು ಕುಕ್ ಈಗಲೇ ರಾಜೀನಾಮೆ ಕೊಟ್ಟು ಹೊಸ ನಾಯಕನಿಗೆ ಹೊಂದಿಕೊಳ್ಳಲು ಅವಕಾಶ ಕೊಡಬೇಕು ಎಂದು ಬಾಯ್ಕಾಟ್ ಒತ್ತಾಯಿಸಿದ್ದಾರೆ. ಅತ್ತ ನಾಸಿರ್ ಹುಸೇನ್ ಕೂಡಾ ಈ ಮೊದಲೇ ನಾಯಕತ್ವವನ್ನು ಹಗುರವಾಗಿ ಕಾಣುವುದಿದ್ದರೆ, ಕುಕ್ ರಾಜೀನಾಮೆ ನೀಡುವುದು ಸೂಕ್ತ ಎಂದಿದ್ದರು. ಅಂತೂ ಸೋತ ಮೇಲೆ ಎಲ್ಲರೂ ಕೆಸರು ಎರಚುವವರೇ ಜಾಸ್ತಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ