ಪಾಕ್ ಆಟಗಾರನ ತಲೆಗೆ ಪೆಟ್ಟು, ಮೆಲ್ಬೋರ್ನ್ ನಲ್ಲಿ ಆತಂಕ ಮೂಡಿಸಿದ ಘಟನೆ

ಗುರುವಾರ, 29 ಡಿಸೆಂಬರ್ 2016 (11:57 IST)
ಮಲ್ಬೋರ್ನ್: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯ ಸಾಕಷ್ಟು ಕಾರಣಗಳಿಗೆ ಸುದ್ದಿಯಾಗುತ್ತಿದೆ. ಪಾಕ್ ಬ್ಯಾಟ್ಸ್ ಮನ್ ಅಝರ್ ಆಲಿ ತಲೆಗೆ ಬಾಲ್ ತಗುಲಿ ಅವರು ಕುಸಿದು ಬೀಳುವುದರೊಂದಿಗೆ ಕೆಲ ಕಾಲ ಕ್ರೀಡಾಂಗಣದಲ್ಲಿ ಆತಂಕ ಸೃಷ್ಟಿಸಿದ ಘಟನೆಯೂ ನಡೆಯಿತು.


ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿದ್ದ ಅಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದಾಗ ಕ್ರೀಸ್ ನ ಸಮೀಪ ಶಾರ್ಟ ಲೆಗ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಯಾಸಿರ್ ಶಾ ಎಸೆದ ಬೌಲಿಂಗ್ ನಲ್ಲಿ ಮ್ಯಾಥ್ಯೂ ವೇಡ್ ಪುಲ್ ಮಾಡುವಾಗ ಬಾಲ್ ಅಲಿ ತಲೆಗೆ ತಗುಲಿತು. ಹೆಲ್ಮೆಟ್ ಧರಿಸಿದ್ದರೂ, ಅಲಿ ಕುಸಿದು ಬಿದ್ದರು.

ಆಸ್ಟ್ರೇಲಿಯಾ ತನ್ನ ತವರು ಆಟಗಾರ ಫಿಲಿಪ್ ಹ್ಯೂಸ್ ನಿಧನದ ನಂತರ ಇಂತಹ ಪ್ರಕರಣಗಳ ಬಗ್ಗೆ ಬೇಗನೇ ಆತಂಕಕ್ಕೊಳಗಾಗುತ್ತಿದೆ. ಇದೀಗ ತನ್ನ ವಿರುದ್ಧ ಆಡುವಾಗಲೇ ಪಾಕ್ ಆಟಗಾರನೊಬ್ಬ ಕ್ರೀಡಾಂಗಣದಲ್ಲಿ ಕುಸಿದು ಬಿದ್ದಿದ್ದರಿಂದ ಆತಂಕಿತರಾದ ಆಸೀಸ್ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಪಾಕ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಅಲಿ ಪ್ರಥಮ ಚಿಕಿತ್ಸೆಗೆ ನೆರವಾದರು.

ತಕ್ಷಣ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. ಸುಧಾರಿಸಿಕೊಂಡ ಮೇಲೆ ಅವರನ್ನು ಮುಂದಿನ ಪರೀಕ್ಷೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ