ಹ್ಯೂಸ್‌ ಸಾವಿಗೆ ಕಾರಣವಾಗಿದ್ದ ಚೆಂಡು ನಾಶ

ಗುರುವಾರ, 26 ಮಾರ್ಚ್ 2015 (12:39 IST)
ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಫಿಲಿಪ್ ಹ್ಯೂಸ್‌ ಸಾವಿಗೆ ಕಾರಣವಾಗಿದ್ದ ಕ್ರಿಕೆಟ್ ಬಾಲ್‌ನ್ನು ನ್ಯೂ ಸೌತ್ ವೇಲ್ಸ್ ಕ್ರಿಕೆಟ್ ಸಂಸ್ಥೆ ನಾಶ ಮಾಡಿದೆ.

"ಹ್ಯೂಸ್ ಸಾವು ಅತ್ಯಂತ ಭಾವನಾತ್ಮಕ ವಿಷಯ. ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡುವ ಯಾವುದೇ ರೀತಿಯ ಸುಳಿವನ್ನು ಇಡಬಾರದು ಎಂದು ಚೆಂಡನ್ನು ನಾಶ ಮಾಡಿದೆವು. ಇದು ಸೌತ್ ವೇಲ್ಸ್ ಕ್ರಿಕೆಟ್ ಸಂಸ್ಥೆಗೆ ಸೇರಿದ ಎಲ್ಲರ ಸಾಮೂಹಿಕ ನಿರ್ಧಾರವಾಗಿತ್ತು. ಅದು ಇನ್ನು ಯಾರಿಗೂ ಸಿಗಲಾರದು ಎಂದಷ್ಟೇ ಹೇಳಬಲ್ಲೆ. ಹೇಗೆ ನಾಶ ಮಾಡಿದೆವು ಎಂದು ಹೇಳಲಾಗದು",  ಎಂದು ಸೌತ್ ವೇಲ್ಸ್ ಕ್ರಿಕೆಟ್ ಸಂಸ್ಥೆಯ ಮಾಧ್ಯಮ ವ್ಯವಸ್ಥಾಪಕರಾಗಿರುವ ಜೋಡಿ ಹಾಕಿನ್ಸ್ ತಿಳಿಸಿದ್ದಾರೆ.
 
ಹ್ಯೂಸ್‌ಗೆ ಸೇರಿದ್ದ ಕ್ರಿಕೆಟ್ ಪರಿಕರ, ಅವರ ಬಟ್ಟೆಗಳ ಬಗ್ಗೆ ವಿಚಾರಿಸಿದಾಗ ಅದನ್ನು ಪೋಷಕರಿಗೆ ತಲುಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 
 
"ಫಿಲಿಪ್ ನೆಲಕ್ಕುರಿಳಿದ್ದ ಪಿಚ್‌ನಲ್ಲಿ ಘಟನೆಯ ನಂತರ ಯಾವುದೇ ಪಂದ್ಯಗಳನ್ನು ಆಡಿಲ್ಲ. ಆದರೆ ಭವಿಷ್ಯದಲ್ಲಿ ಅಲ್ಲಿ ಪಂದ್ಯ ನಡೆಸುವುದನ್ನು ಅಲ್ಲಗಳೆಯಲಾಗದು", ಎಂದು ಹಾಕಿನ್ಸ್ ಹೇಳಿದ್ದಾರೆ. 
 
ಕಳೆದ ನವೆಂಬರ್ ತಿಂಗಳಲ್ಲಿ ಸೌತ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ತಂಡಗಳ ನಡುವೆ ನಡೆಯುತ್ತಿದ್ದ ದೇಶಿಯ ಪಂದ್ಯಾವಳಿಯಲ್ಲಿ ಸೀನ್ ಅಬೋಟ್ ಎಸೆದ ಚೆಂಡು 25 ವರ್ಷದ ಹ್ಯೂಸ್ ತಲೆಗೆ ಬಡಿದು ಅವರು ಅಲ್ಲೇ ಕುಸಿದು ಬಿದ್ದಿದ್ದರು.
 
ಪ್ರಜ್ಞೆ ಕಳೆದುಕೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಎರಡು ದಿನಗಳ ನಂತರ ಕೊನೆಯುಸಿರೆಳೆದಿದ್ದರು. 
 
ಹ್ಯೂಸ್ ದುರಂತ ಸಾವಿಗೆ ವಿಶ್ವದಾದ್ಯಂತ ಮರುಕ ವ್ಯಕ್ತವಾಗಿತ್ತು. 

ವೆಬ್ದುನಿಯಾವನ್ನು ಓದಿ