ನವದೆಹಲಿ: ದೊಡ್ಡ ಗಾತ್ರದ ಬ್ಯಾಟ್ ಹೊಂದಿರುವ ವಿಶ್ವದ ಘಟಾನುಘಟಿ ಆಟಗಾರರಿಗೆಲ್ಲಾ ಇದೀಗ ಬಂದಿರುವ ಹೊಸ ನಿಯಮ ಕಂಟಕ ತರಲಿದೆ. ಎಂಸಿಸಿ ತಂದಿರುವ ಹೊಸ ನಿಯಮದ ಪ್ರಕಾರ ಬ್ಯಾಟ್ ಗಾತ್ರ 40 ಎಂಎಂರಷ್ಟಿರಬೇಕು ಎಂದಿದೆ.
ಈ ನಿಯಮ ಅಕ್ಟೋಬರ್ 1 ರಿಂದ ಜಾರಿಯಾಗಲಿದೆ. ಹೀಗಾಗಿ ಧೋನಿ, ಕ್ರಿಸ್ ಗೇಲ್, ಡೇವಿಡ್ ವಾರ್ನರ್ ರಂತಹ ಬಿಗ್ ಹಿಟ್ಟರ್ ಗಳು ಬ್ಯಾಟ್ ನ ತುದಿ ಭಾಗದ ಗಾತ್ರ ಕಡಿಮೆ ಮಾಡಲೇಬೇಕಿದೆ. ಅಲ್ಲದೆ ಅದರೊಂದಿಗೆ ತಮ್ಮ ಬ್ಯಾಟಿಂಗ್ ಸ್ಟ್ರಾಟಜಿಯನ್ನೂ ಬದಲಾಯಿಸಿಕೊಳ್ಳಬೇಕಿದೆ.
ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಈ ನಿಯಮ ಬಾಧಕವಾಗುವುದಿಲ್ಲ. ಕೊಹ್ಲಿ, ಇಂಗ್ಲೆಂಡ್ ನ ಜೋ ರೂಟ್ ಬ್ಯಾಟ್ ಗಾತ್ರ ನಿಗದಿತ ನಿಯಮದಂತೇ ಇದೆ. ಭಾರತದ ಬ್ಯಾಟ್ಸ್ ಮನ್ ಗಳ ಪೈಕಿ ಧೋನಿ ಮಾತ್ರ 45 ಎಂಎಂ ದಪ್ಪದ ಬ್ಯಾಟ್ ಬಳಸುತ್ತಾರೆ. ಇದರ ಭಾರ 1250 ರಿಂದ 1300 ಗ್ರಾಂನಷ್ಟಿದ್ದು, ಉಳಿದ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ಹೋಲಿಸಿದರೆ ಅತೀ ಭಾರವುಳ್ಳದ್ದಾಗಿದೆ. ಭಾರತದ ಉಳಿದೆಲ್ಲಾ ಬ್ಯಾಟ್ಸ್ ಮನ್ ಗಳ ಬ್ಯಾಟ್ ನ ಗಾತ್ರ ನಿಗದಿತ ನಿಯಮದ ಪ್ರಕಾರವೇ ಇದೆ. ಹಾಗಾಗಿ ಧೋನಿಗೆ ಮಾತ್ರ ಈ ಸಂಕಟ.
ಉಳಿದಂತೆ ವಿಂಡೀಸ್ ನ ಬಿಗ್ ಹಿಟ್ಟರ್ ಪೊಲ್ಲಾರ್ಡ್ 50 ಎಂಎಂ ದಪ್ಪದ ಬ್ಯಾಟ್ ನಲ್ಲಿ ಬೌಲರ್ ಗಳ ಚಿಂದಿ ಮಾಡುತ್ತಿದ್ದರು. ಆದರೆ ಅವರು ಐಪಿಎಸ್ ಸಂದರ್ಭದಲ್ಲಿಯೇ ಬ್ಯಾಟ್ ಬದಲಾವಣೆ ಮಾಡಿಕೊಂಡಿದ್ದರು.