ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬಿಗ್ ಲಾಸ್ ಆಗಿದೆ. ಇತ್ತೀಚೆಗಷ್ಟೇ ಪೂರ್ಣ ಪ್ರಮಾಣದಲ್ಲಿ ನಾಯಕರಾದರಲ್ಲ. ಇನ್ನೇನು ಲಾಸ್ ಅಂತೀರಾ? ಇದು ಪ್ರಚಾರ ರಾಯಭಾರಿ ವಿಷಯಕ್ಕೆ ಸಂಬಂಧಪಟ್ಟಿದ್ದು.
ಇನ್ನು ಮುಂದೆ, ಅವರು ಆಡಿಡಾಸ್ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿರುವುದಿಲ್ಲ. ಮೂರು ವರ್ಷದ ತಮ್ಮ ಒಪ್ಪಂದವನ್ನು ಮುಂದುವರಿಸದೇ ಇರಲು ಆಡಿಡಾಸ್ ನಿರ್ಧರಿಸಿರುವುದು ಇದಕ್ಕೆ ಕಾರಣ. ಸದ್ಯಕ್ಕೆ ಯಶಸ್ಸಿನ ಉತ್ತುಂಗದಲ್ಲಿರುವ ನಾಯಕನ ಒಪ್ಪಂದವನ್ನು ಜರ್ಮನ್ ನಿರ್ಮಿತ ಸಂಸ್ಥೆ ಇಲ್ಲಿಗೇ ಮೊಟಕುಗೊಳಿಸುತ್ತಿರುವುದು ನಿಜಕ್ಕೂ ಅಚ್ಚರಿ.
ಆದರೆ ಸಂಸ್ಥೆಯ ಪ್ರಕಾರ ಇದು ಕೊಹ್ಲಿ ಹಾಗೂ ಆಡಿಡಾಸ್ ಜಂಟಿಯಾಗಿ ತೆಗೆದುಕೊಂಡ ನಿರ್ಧಾರವಂತೆ. 2014 ರಲ್ಲಿ ಕೊಹ್ಲಿ ಕಂಪನಿ ಜತೆ 30 ಕೊಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಸದ್ಯಕ್ಕೆ ಕೊಹ್ಲಿ 17 ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿದ್ದಾರೆ. ಆದರೆ ಕನ್ನಡಿಗ ಕೆಎಲ್ ರಾಹುಲ್, ರೋಹಿತ್ ಶರ್ಮಾ ಆಡಿಡಾಸ್ ರಾಯಭಾರಿಗಳಾಗಿ ಮುಂದುವರಿಯಲಿದ್ದಾರೆ.
ಆಡಿಡಾಸ್ ಹೋದರೇನಂತೆ ಕೊಹ್ಲಿಯನ್ನು ಚೀನಾ ಮೂಲದ ಮೊಬೈಲ್ ನಿರ್ಮಾಣ ಕಂಪನಿ ತನ್ನ ಪ್ರಚಾರ ರಾಯಭಾರಿಯಾಗಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ