ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಇತ್ತೀಚಿಗೆ ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾರನ್ನು ಭೇಟಿಯಾಗಿದ್ದು ನಿಮಗೆ ಗೊತ್ತಿರಲಿಕ್ಕೆ ಸಾಕು. ಯುವರಾಜ್ ಸಿಂಗ್ ಅವರು ಶನಿವಾರ ಮುಂಬೈನಲ್ಲಿ ಆಯೋಜಿಸಿದ್ದ 'ಯಸ್ ವೀ ಕ್ಯಾನ್ ' ಎಂಬ ಕ್ಯಾನ್ಸರ್ ಚಾರಿಟಿ ಕಾರ್ಯಕ್ರಮದಲ್ಲಿ ಇತರ ಸೆಲೆಬ್ರಿಟಿಗಳ ಈ ಮೂವರು ಸಹ ಭಾಗವಹಿಸಿದ್ದರು.
ತಾವು ಮೂವರು ನಿಂತ ಫೋಟೋವನ್ನು ಪ್ರಕಟಿಸಿದ್ದ ಟ್ವಿಟರ್ ಕಿಂಗ್ ಸೆಹ್ವಾಗ್, 'ನಾಲ್ಕು ಟೆಸ್ಟ್ ತ್ರಿಶತಕ ಮತ್ತು 4 ಏಕದಿನ ದ್ವಿಶತಕಗಳು ಯೂನಿವರ್ಸ್ ಬಾಸ್ ಗೇಲ್ ಜತೆಗೆ ಒಂದೇ ಚಿತ್ರದಲ್ಲಿ', ಎಂದು ಟ್ವೀಟ್ ಮಾಡಿ ಗಮನ ಸೆಳೆದಿದ್ದರು.
ಅದರ ಬಳಿಕ ಗೇಲ್ ಇನ್ಸ್ಟಾಗ್ರಾಮ್‌ನಲ್ಲಿ ಮಿಸ್ಟರ್ ಟೆಲೆಂಟ್ ಶರ್ಮಾರಿಗೆ ಒಂದು ಸವಾಲು ಹಾಕಿದ್ದಾರೆ. ತ್ರಿಶತಕದ ಕ್ಲಬ್‌ನಲ್ಲಿ ತಮ್ಮಿಬ್ಬರನ್ನು ( ತಾವು ಮತ್ತು ಸೆಹ್ವಾಗ್) ಸೇರುವಂತೆ ಅವರು ಆಹ್ವಾನವನ್ನಿತ್ತಿದ್ದಾರೆ.
ಸೆಹ್ವಾಗ್ ಅಪ್ಲೋಡ್ ಮಾಡಿದ್ದ ತಾವು ಮೂವರಿದ್ದ ಫೋಟೋವನ್ನೇ ಪ್ರಕಟಿಸಿರುವ ಗೇಲ್ ಇನ್ಸ್ಟಾಗ್ರಾಮ್ ಇಂತಿದೆ: 'ಏಕದಿನದಲ್ಲಿ ದ್ವಿಶತಕ ಕ್ಲಬ್ ಇದು. ರೋಹಿತ್ ಟೆಸ್ಟ್‌ನಲ್ಲಿ ಕೇವಲ ತ್ರಿಶತಕ ಬಾರಿಯಬೇಕಿದೆ. ಆಗ ನಮ್ಮದು ತ್ರಿಶತಕದ ಕ್ಲಬ್ ಆಗುತ್ತದೆ. ದಂತಕಥೆಗಳ ನಡುವೆ ನಿಲ್ಲಲು ಬಹಳ ಸಂತೋಷವಾಗುತ್ತಿದೆ'.
ಟೆಸ್ಟ್ ಕ್ರಿಕೆಟ್‌ನಲ್ಲಿ ಗೇಲ್ ಗರಿಷ್ಠ ರನ್ 333. ಏಕದಿನದಲ್ಲಿ ಗರಿಷ್ಠ ರನ್ (264) ವಿಶ್ವದಾಖಲೆ ಹೊಂದಿರುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೂ ದ್ವಿಶತಕವನ್ನು ಬಾರಿಸಿಲ್ಲ. ದೀರ್ಘ ಅವಧಿಯ ಕ್ರಿಕೆಟ್ ರೂಪದಲ್ಲಿ ಅವರ ಅತ್ಯುತ್ತಮ ಮೊತ್ತ 177.