ಮತ ಚಲಾಯಿಸಲು ದುಬೈನಿಂದ ರಾಜಕೋಟ್‌ಗೆ ಬಂದ ಚೇತೇಶ್ವರ್ ಪೂಜಾರ್

ಬುಧವಾರ, 30 ಏಪ್ರಿಲ್ 2014 (14:30 IST)
ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಪರ ಆಡುತ್ತಿರುವ ಕ್ರಿಕೆಟಿಗ ಚೇತೇಶ್ವರ ಪೂಜಾರ್ ಮತ ಚಲಾಯಿಸುವುದಕ್ಕಾಗಿ ಸ್ವದೇಶಕ್ಕೆ ಆಗಮಿಸುವುದರ ಮೂಲಕ ಮತದಾನದ ಮಹತ್ವವನ್ನು ಸಾರಿ ಹೇಳಿದ್ದಾರೆ. ಇಂದೇ ಅವರು ದುಬಾಯಿಗೆ ಹಿಂತಿರುಗಲಿದ್ದಾರೆ.
 
ಮೂಲತಃ ರಾಜಕೋಟ್ ನಗರದವರಾದ ಅವರನ್ನು ರಾಜ್ಯ ಚುನಾವಣಾ ಆಯೋಗ ತನ್ನ "ಐಕಾನ್" ಮತ್ತು ರಾಜಕೋಟ್ ಜಿಲ್ಲೆಯ ಸಂಸದೀಯ ಚುನಾವಣೆಗಳ "ರಾಯಭಾರಿ" ಯಾಗಿ ಘೋಷಿಸಿದೆ. 
 
ತಮ್ಮ ಮತವನ್ನು ಚಲಾಯಿಸಲು ಅಷ್ಟು ದೂರದಿಂದ ಬಂದಿರುವ ಪೂಜಾರ್ ಉತ್ಸಾಹವನ್ನು ಕೊಂಡಾಡಿರುವ ರಾಜಕೋಟ್ ಜಿಲ್ಲಾಧಿಕಾರಿ ಈ ಮೂಲಕ ಅವರು ಇತರರಿಗೆ ಸ್ಫೂರ್ತಿ ನೀಡಿದ್ದಾರೆ. ಅವರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದರು.
 
ಮತ ಚಲಾಯಿಸಿದ ನಂತರ ವರದಿಗಾರರ ಜತೆ ಮಾತನಾಡುತ್ತಿದ್ದ ಪೂಜಾರ್ "ಹೊಸ ಸರ್ಕಾರವನ್ನು ರಚಿಸಲು ಮತ ಚಲಾಯಿಸುವುದು ಎಲ್ಲರ ಕರ್ತವ್ಯ. ತಮ್ಮ ಅಮೂಲ್ಯ ಸಮಯವನ್ನು ಮತ ಚಲಾಯಿಸಲು ವ್ಯಯಿಸಿ ಎಂದು ನಾನು ಯುವಕರಲ್ಲಿ ಮತ್ತು ಹಿರಿಯರಲ್ಲಿ ಕೇಳಿಕೊಳ್ಳುತ್ತೇನೆ" ತಿಳಿಸಿದರು. ಈ ಸಂದರ್ಭದಲ್ಲಿ ಪತ್ನಿ ಪೂಜಾ ಅವರಿಗೆ ಸಾಥ್ ನೀಡಿದರು. 
 
ಪೂಜಾರ್ ಅವರ ಮನವಿ ಮತದಾರರಿಗೆ ಸ್ಪೂರ್ತಿ ನೀಡಲಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ರಾಜಕೋಟ್ ಜಿಲ್ಲಾಧಿಕಾರಿ ಭರವಸೆ ವ್ಯಕ್ತ ಪಡಿಸಿದ್ದಾರೆ. ಸೌರಾಷ್ಟ್ರ ವಿಭಾಗದಲ್ಲಿ 7 ಲೋಕಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ