ಕೋಲ್ಕೊತ್ತಾ: ಟೀಂ ಇಂಡಿಯಾ ನಾಯಕತ್ವಕ್ಕೆ ಧೋನಿ ರಾಜೀನಾಮೆಯಿತ್ತರೂ, ಆ ಪದವಿ ಮಾತ್ರ ಅವರನ್ನು ಬಿಡುತ್ತಿಲ್ಲ. ಈಗ ಆಗಿದ್ದೂ ಅದೇ.
ಕೋಲ್ಕೋತ್ತಾದಲ್ಲಿ ಶನಿವಾರ ಟೀಂ ಇಂಡಿಯಾ ಪ್ರಾಕ್ಟೀಸ್ ಸೆಷನ್ ನಡೆಯುತ್ತಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ಹಾಜರಿರಲಿಲ್ಲ. ಹೀಗಾಗಿ ಧೋನಿಯೇ ಭಾರತ ತಂಡದ ನೇತೃತ್ವ ವಹಿಸಿದ್ದರು.
ಪ್ಯಾಡ್ ಕಟ್ಟಿಕೊಂಡು ತಾವು ಅಭ್ಯಾಸ ನಡೆಸಿದ್ದು ಮಾತ್ರವಲ್ಲ, ತಂಡದ ಸದಸ್ಯರೊಂದಿಗೆ ಮೀಟಿಂಗ್ ನಡೆಸಿದರು. ಯುವಕರಿಗೆ ಸಲಹೆ ಕೊಟ್ಟರು. ಕೊನೆಗೆ ಪಿಚ್ ಬಳಿ ಬಂದು ಪರೀಕ್ಷೆ ನಡೆಸಿದರು. ಮಂಡಿಯೂರಿ ಕೂತು ಕೈ ಮುಷ್ಠಿ ಹಿಡಿದು ಪಿಚ್ ಕೂಲಂಕುಶವಾಗಿ ಪರಿಶೀಲನೆ ನಡೆಸಿದರು. ನಂತರ ಬೆಂಗಾಳ ಕ್ರಿಕೆಟ್ ತಂಡದ ಮಾಜಿ ನಾಯಕ ದೇವಾಂಗ್ ಗಾಂಧಿ ಜತೆ ಬಹಳ ಹೊತ್ತು ಮಾತುಕತೆ ನಡೆಸಿದರು.
“ಅವರು ನಾಯಕನಲ್ಲದಿದ್ದರೂ, ವಿಕೆಟ್ ಕೀಪರ್ ಎಂದರೆ ಎರಡನೇ ನಾಯಕನಿದ್ದಂತೆ. ಬ್ಯಾಟ್ಸ್ ಮನ್ ಹೇಗೆ ಆಡುತ್ತಾನೆ ಎನ್ನುವುದನ್ನು ಅವರು ವಿಕೆಟ್ ಹಿಂದೆ ನಿಂತು ನಮಗೆ ಸಲಹೆ ಕೊಡುತ್ತಿರುತ್ತಾರೆ” ಎಂದು ಮಾಜಿ ನಾಯಕನ ಬಗ್ಗೆ ವೇಗಿ ಭುವನೇಶ್ವರ್ ಕುಮಾರ್ ಹೊಗಳುತ್ತಾರೆ. ಅಂತೂ ಧೋನಿ ಈಗ ಟೀಂ ಇಂಡಿಯಾಕ್ಕೆ ಒಂಥರಾ ಅನಧಿಕೃತ ನಾಯಕನಿದ್ದಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ