ಇಂಗ್ಲೆಂಡ್ ಕ್ರಿಕೆಟಿಗರಿಗೆ ಈಗ ದೇಶ ಮೊದಲೋ ಐಪಿಎಲ್ ಮುಖ್ಯವೋ ಎಂಬ ಸಂಕಟ

ಗುರುವಾರ, 19 ಜನವರಿ 2017 (11:24 IST)
ಲಂಡನ್: ಏಪ್ರಿಲ್ ನಿಂದ ಐಪಿಎಲ್ ಕ್ರಿಕೆಟ್ ಆರಂಭವಾಗಲಿದೆ. ಪ್ರತೀ ವರ್ಷವೂ ವಿದೇಶಿ ಆಟಗಾರರಿಗೆ ಇಂತಹದ್ದೊಂದು ಸಂಕಟ ಸಾಮಾನ್ಯ. ದೇಶವೋ, ಐಪಿಎಲ್ ಮುಖ್ಯವೋ ಎಂಬುದು ಇದೀಗ ಇಂಗ್ಲೆಂಡ್ ಕ್ರಿಕೆಟಿಗರ ಉಭಯ ಸಂಕಟ.

 
ದುಡ್ಡು ಬರುವ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಬಿಟ್ಟು ದುರ್ಬಲ ಎದುರಾಳಿ ಐರ್ಲೆಂಡ್ ತಂಡದ ವಿರುದ್ಧ ಏಕದಿನ ಸರಣಿ ಆಡಬೇಕಾದ ಉಭಯ ಸಂಕಟದಲ್ಲಿದ್ದಾರೆ. ಅವರಲ್ಲಿ ಕೆಲವು ಬ್ಯಾಟ್ಸ್ ಮನ್ ಗಳು ಈಗಾಗಲೇ ಐಪಿಎಲ್ ಗೆ ಬರುವ ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ನಿರ್ದೇಶಕ ಆಂಡ್ರ್ಯೂ ಸ್ಟ್ರಾಸ್ ಸ್ಟ್ರಿಕ್ಟ್ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಬ್ಯಾಟ್ಸ್ ಮನ್ ಜೋಸ್ ಬಟ್ಲರ್ “ನನಗೆ ಭಾರತದಲ್ಲಿ ಆಡುವುದೆಂದರೆ ಇಷ್ಟ. ಆದರೆ ಎಲ್ಲಕ್ಕಿಂತ ಮುಖ್ಯ ದೇಶದ ಪರ ಆಡುವುದು. ಐಪಿಎಲ್ ನಲ್ಲಿ ಆಡುವುದು ನಿಜಕ್ಕೂ ಉತ್ತಮ ಅನುಭವ ಕೊಡುತ್ತದೆ ಮತ್ತು ಇಂಗ್ಲೆಂಡ್ ಪರ ಆಡುವುದು ನಿಜಕ್ಕೂ ಹೆಮ್ಮೆಯ ವಿಷಯ. ಯಾವುದನ್ನು ಆಯ್ಕೆ ಮಾಡಬೇಕು ಎನ್ನುವ ಉಭಯ ಸಂಕಟ ನಮ್ಮದು” ಎಂದಿದ್ದಾರೆ.

ಈಗಾಗಲೇ ಜೋ ರೂಟ್ ತನಗೆ ಐಪಿಎಲ್ ಗಿಂತ ಕುಟುಂಬವೇ ಮುಖ್ಯ ಎಂದಿದ್ದಾರೆ. ಹೀಗಾಗಿ ಅವರು ಐಪಿಎಲ್ ನಲ್ಲಿ ಭಾಗವಹಿಸುವ ಯಾವುದೇ ಆಸಕ್ತಿ ಹೊಂದಿಲ್ಲ ಎನ್ನುವುದು ಸ್ಪಷ್ಟ. ಇಂಗ್ಲೆಂಡ್ ಕ್ರಿಕೆಟಿಗರ ಪೈಕಿ ಇಯಾನ್ ಮಾರ್ಗನ್, ಬೆನ್ ಸ್ಟೋಕ್ಸ್ ಮುಂತಾದವರೂ ಐಪಿಎಲ್ ನಲ್ಲಿ ಆಡುವ ಆಸಕ್ತಿಯುಳ್ಳವರಾಗಿದ್ದಾರೆ.

ಕಳೆದ ವರ್ಷ ಇದೇ ರೀತಿ ಐರ್ಲೆಂಡ್ ಸರಣಿಯ ಸಂದಿಗ್ಧತೆ ಎದುರಾದಾಗ, ಸ್ಟ್ರಾಸ್ ಮಾರ್ಗನ್ ರನ್ನು ಐಪಿಎಲ್ ನಲ್ಲಿ ಆಡಲು ಅನುಮತಿ ನೀಡಿದ್ದರು. ಆದರೆ ಈ ಬಾರಿ ಜೂನ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ನ ಪೂರ್ವ ಭಾವಿ ಪಂದ್ಯವೆಂದೇ ಪರಿಗಣಿತವಾಗಿರುವ ಐರ್ಲೆಂಡ್ ಸರಣಿ ತಪ್ಪಿಸಿಕೊಳ್ಳುವುದು ಕ್ರಿಕೆಟಿಗರಿಗೆ ಅಷ್ಟು ಸುಲಭವಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ