Bangalore : ಮಹೇಂದ್ರ ಸಿಂಗ್ ಧೋನಿ ಶೇ.100ರಷ್ಟು ಫಿಟ್ ಆಗಿದ್ದಾರೆ. ಅಷ್ಟೇ ಕಠಿಣ ಅಭ್ಯಾಸವನ್ನ ನಡೆಸುತ್ತಿದ್ದಾರೆ. ಅವರು ಅತ್ಯಂತ ಮೌಲ್ಯಯುತ ಹಾಗೂ ಪರಿಣಾಮಕಾರಿ ಆಟಗಾರ. ಸಿಎಸ್ಕೆ ತಂಡದಲ್ಲಿನ ಅವರ ಜವಬ್ದಾರಿಯಿಂದ ನಾವಂತು ಸಂತುಷ್ಟರಾಗಿದ್ದೇವೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಿಂಗ್ ಯಾರು ಎಂದು ಕೇಳಿದ್ರೆ ಥಟ್ಟನೆ ಬರುವ ಉತ್ತರ ಮಹೇಂದ್ರ ಸಿಂಗ್ ಧೋನಿ. ಸಿಎಸ್ಕೆ ಅಭಿಮಾನಿಗಳ ಪಾಲಿನ ತಲೈವಾ ಕೆಲ ದಿನಗಳ ಹಿಂದೆಯಷ್ಟೇ 40ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಇತ್ತ ಧೋನಿ ಹೊಸ ವಸಂತಕ್ಕೆ ಕಾಲಿಡುತ್ತಿದ್ದಂತೆ, ಅತ್ತ ಕೂಲ್ ಕ್ಯಾಪ್ಟನ್ ನಿವೃತ್ತಿ ಸುದ್ದಿಗಳು ಹರಿದಾಡಿದ್ದವು. ಇದಕ್ಕೆ ಒಂದು ಕಾರಣ ಮುಂದಿನ ವರ್ಷ ಐಪಿಎಲ್ನಲ್ಲಿ ಮೆಗಾ ಹರಾಜು ನಡೆಯಲಿರುವುದು.ಹೀಗಾಗಿ ಯುಎಇನಲ್ಲಿ ನಡೆಯಲಿರುವ ಐಪಿಎಲ್ ಮೂಲಕ ಮಹೇಂದ್ರ ಸಿಂಗ್ ಧೋನಿ ಚುಟುಕು ಕ್ರಿಕೆಟ್ ಕದನಕ್ಕೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಈಗಾಗಲೇ ಸಿಎಸ್ಕೆ ತಂಡವು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಚಾಂಪಿಯನ್ ಪಟ್ಟದೊಂದಿಗೆ ಧೋನಿ ಐಪಿಎಲ್ಗೆ ವಿದಾಯ ಬಯಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಆದರೀಗ ಈ ಎಲ್ಲಾ ಸುದ್ದಿಗಳಿಗೆ ಖುದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಿಇಒ ಕಾಶಿ ವಿಶ್ವನಾಥನ್ ಪುಲ್ಸ್ಟಾಪ್ ಹಾಕಿದ್ದಾರೆ. ಧೋನಿ ಸದ್ಯಕ್ಕಂತು ನಿವೃತ್ತಿ ಬಗ್ಗೆ ಯೋಚಿಸಿಲ್ಲ, ಅವರು ಇನ್ನೂ ಎರಡು ವರ್ಷಗಳ ಕಾಲ ಐಪಿಎಲ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಶಿ ವಿಶ್ವನಾಥನ್ ತಿಳಿಸಿದ್ದಾರೆ. ಇದರೊಂದಿಗೆ ಯುಎಇನ ಐಪಿಎಲ್ ಮೂಲಕ ಧೋನಿ ನಿವೃತ್ತಿ ನೀಡುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ.
ಈ ಬಗ್ಗೆ ಮಾತನಾಡಿರುವ ಸಿಎಸ್ಕೆ ಸಿಇಒ, ಮಹೇಂದ್ರ ಸಿಂಗ್ ಧೋನಿ ಶೇ.100ರಷ್ಟು ಫಿಟ್ ಆಗಿದ್ದಾರೆ. ಅಷ್ಟೇ ಕಠಿಣ ಅಭ್ಯಾಸವನ್ನ ನಡೆಸುತ್ತಿದ್ದಾರೆ. ಅವರು ಅತ್ಯಂತ ಮೌಲ್ಯಯುತ ಹಾಗೂ ಪರಿಣಾಮಕಾರಿ ಆಟಗಾರ. ಸಿಎಸ್ಕೆ ತಂಡದಲ್ಲಿನ ಅವರ ಜವಬ್ದಾರಿಯಿಂದ ನಾವಂತು ಸಂತುಷ್ಟರಾಗಿದ್ದೇವೆ.ಹೀಗಾಗಿ ಇನ್ನು ಎರಡು ವರ್ಷಗಳ ಕಾಲ ಅವರು ಐಪಿಎಲ್ನಲ್ಲಿ ಸಿಎಸ್ಕೆ ಪರ ಮುಂದುವರೆಯಲಿದ್ದಾರೆ ಎಂದು ತಿಳಿಸಿದರು. ಈ ಮೂಲಕ ಮುಂದಿನ ಮೆಗಾ ಹರಾಜಿನಲ್ಲೂ ಸಿಎಸ್ಕೆ ತಂಡವೇ ಧೋನಿಯನ್ನು ಉಳಿಸಿಕೊಳ್ಳುವ ಸಣ್ಣ ಸೂಚನೆಯನ್ನು ನೀಡಿದ್ದಾರೆ ಕಾಶಿ ವಿಶ್ವನಾಥನ್.