ಶಮಿ ಪುತ್ರಿ ಐಸಿಯುನಲ್ಲಿರುವ ಬಗ್ಗೆ ತಿಳಿದಿರಲಿಲ್ಲ: ಕೊಹ್ಲಿ

ಗುರುವಾರ, 13 ಅಕ್ಟೋಬರ್ 2016 (14:21 IST)
ಕೋಲ್ಕತ್ತಾ ಟೆಸ್ಟ್ ಗೆಲ್ಲುವ ಮೂಲಕ ಭಾರತ ಪಾಕಿಸ್ತಾನವನ್ನು ಹಿಂದಿಕ್ಕಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೇರಿತು. ಇಂದೋರ್ ಟೆಸ್ಟ್ ಗೆಲ್ಲುವ ಮೂಲಕ ಆ ಸ್ಥಾನವನ್ನು ಮತ್ತಷ್ಟು ಭದ್ರ ಪಡಿಸಿಕೊಂಡಿತು. ಕಾನ್ಪುರ್ ಟೆಸ್ಟ್‌ನಲ್ಲಿ ಕೇವಲ ಸ್ಪಿನ್ನರ್‌ಗಳು ಬಾಲ್ ಮೇಲೆ ಡಾಮಿನೇಟ್ ಮಾಡಿದ್ದರು. ಆದರೆ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್‌ನಲ್ಲಿ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಸಹ ತಲಾ 6 ವಿಕೆಟ್ ಪಡೆದು ಮಿಂಚಿದರು. 
ಈ ಸರಣಿಯುದ್ದಕ್ಕೂ ಭಾರತೀಯ ಬೌಲರ್‌ಗಳ ಪ್ರಭಾವ ಎದ್ದು ಕಾಣುತ್ತಿತ್ತು. ವಿಶೇಷವಾಗಿ ಮೊಹಮ್ಮದ್ ಶಮಿ ಅವರ ಪ್ರದರ್ಶನ ಹೆಚ್ಚು ಶ್ಲಾಘನೀಯವಾದುದು. ಏಕೆಂದರೆ ತಮ್ಮ ಪುಟ್ಟ ಮಗಳು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದರೂ ಶಮಿ ದೇಶಕ್ಕಾಗಿ ಆಡಿದ್ದರು. ಸಹಿಸಲಾಗದ ವೇದನೆ ನಡುವೆಯೂ ಅದ್ಭುತ ಪ್ರದರ್ಶನ ತೋರಿದ್ದರು. 
 
ಕೋಲ್ಕತ್ತಾ ಟೆಸ್ಟ್ ಪಂದ್ಯದ ಸಮಯದಲ್ಲಿ ಶಮಿ ಮಗಳು ಆಯಿರಾ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದಳು. ಎರಡನೆಯ ದಿನದಾಟದ ಅಂತ್ಯಕ್ಕೆ ಶಮಿಗೆ ಇದನ್ನು ತಿಳಿಸಲಾಯಿತು. ಆದರೆ ಶಮಿ ಆಟದಲ್ಲಿ ಮುಂದುವರೆಯಲು ನಿರ್ಧರಿಸಿದರು. ಎರಡು ಇನ್ನಿಂಗ್ಸ್‌ಗಳಲ್ಲಿ ತಲಾ 3 ವಿಕೆಟ್ ಕಿತ್ತು ಭಾರತದ ಗೆಲುವು ಮತ್ತು ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರುವುದರಲ್ಲಿ ಮಹತ್ವದ ಪಾತ್ರ ವಹಿಸಿದರು. 
 
ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶಮಿಯನ್ನು ಶ್ಲಾಘಿಸಿರುವ ನಾಯಕ ವಿರಾಟ್ ಕೊಹ್ಲಿ ಆ ಸಂದರ್ಭದಲ್ಲಿ ಶಮಿ ಮಗಳು ಆಸ್ಪತ್ರೆಗೆ ದಾಖಲಾದ ವಿಷಯ ತಮಗೆ ತಿಳಿದೇ ಇರಲಿಲ್ಲ ಎಂದಿದ್ದಾರೆ. 
 
ಶಮಿ ಮಗಳು ಆಸ್ಪತ್ರೆಯಲ್ಲಿರುವ ವಿಷಯ ನನಗೆ ತಿಳಿದಿರಲಿಲ್ಲ. ಬಳಿಕ ಅವರೇ ತಿಳಿಸಿದರು. ಇಂತಹ ಗುಣಗಳಿಂದಲೇ ಅವರು ಇಷ್ಟವಾಗುತ್ತಾರೆ. ಅವರು ಭಾರತದ ಟಾಪ್ ಬೌಲರ್‌ಗಳಲ್ಲಿ ಒಬ್ಬರು ಎಂಬುದು ನಿರ್ವಿವಾದ. ಡ್ರೆಸ್ಸಿಂಗ್ ರೂಮ್ ಇರಲಿ, ಮೈದಾನವಿರಲಿ ಶಮಿ ನಡೆದುಕೊಳ್ಳುವ ರೀತಿ ಅನುಕರಣೀಯ ಎಂದು ತಮ್ಮ ಹುಡುಗನನ್ನು ಹೊಗಳಿದ್ದಾರೆ ಕೊಹ್ಲಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ