ನವದೆಹಲಿ: ಇಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಂತೆ ರನ್ ಮೆಷಿನ್ ಎಂದು ಹೊಗಳಿ ಅಟ್ಟಕ್ಕೇರಿಸುವವರಿದ್ದಾರೆ. ಆದರೆ ಒಂದು ಕಾಲದಲ್ಲಿ ಕೊಹ್ಲಿ ಜೀವನ ಹೇಗಿತ್ತು ಗೊತ್ತಾ? ಸ್ವತಃ ಅವರೇ ಇದನ್ನು ಬಹಿರಂಗಗೊಳಿಸಿದ್ದಾರೆ.
ಟೀಂ ಇಂಡಿಯಾದ ಕೋಚ್ ಆಗಿದ್ದ ಡಂಕನ್ ಫ್ಲೆಚರ್ ಅವರೊಂದಿಗೆ ನಡೆದ ಮಾತುಕತೆಯಿಂದಲೇ ನಾನು ಬದಲಾದೆ ಎನ್ನುತ್ತಾರೆ ಕೊಹ್ಲಿ. ಅವರು ಯಾವಾಗಲೂ ಕ್ರಿಕೆಟ್ ಎಂದರೆ ವೃತ್ತಿ ಯೋಗ್ಯವಲ್ಲದ ವೃತ್ತಿಪರ ಕ್ರೀಡೆ ಎನ್ನುತ್ತಿದ್ದರಂತೆ.
2012 ರಲ್ಲಿ ಕೊಹ್ಲಿ ಬಾಂಗ್ಲಾದೇಶ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ಐಪಿಎಲ್ ನಲ್ಲಿ ಬೌಲರ್ ಗಳನ್ನು ಚೆಂಡಾಡುವ ಉತ್ಸಾಹದಲ್ಲಿದ್ದರಂತೆ. ಆದರೆ ಅವರು ಸಂಪೂರ್ಣ ವಿಫಲರಾದರು. ಆಗಲೇ ಅವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡಿದ್ದಂತೆ.
“ಆಗೆಲ್ಲಾ ನಾನು ಫಿಟ್ ನೆಸ್ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ. ಬೇಕಾಬಿಟ್ಟಿ ತಿನ್ನುತ್ತಿದ್ದೆ, ಕುಡಿಯುತ್ತಿದ್ದೆ. ತಡವಾಗಿ ಮಲಗುತ್ತಿದ್ದೆ. ಒಟ್ಟಾರೆ ಶಿಸ್ತಿನ ಜೀವನವಿರಲಿಲ್ಲ. ಆದರೆ ಐಪಿಎಲ್ ನಲ್ಲಿ ವಿಫಲವಾದ ನಂತರ ನನ್ನನ್ನು ನಾನು ಬದಲಾಯಿಸಿಕೊಂಡೆ. ಆಹಾರ ಕ್ರಮದಲ್ಲಿ ಬದಲಾವಣೆ ತಂದೆ. ಐಸ್ ಕ್ರೀಂ, ಡೆಸರ್ಟ್ಸ್, ತಂಪು ಪಾನೀಯ ಯಾವುದನ್ನೂ ಮುಟ್ಟುತ್ತಿರಲಿಲ್ಲ. ಹೀಗಾಗಿ ಕೆಲವೊಮ್ಮೆ ಹಸಿವು ತಾಳಲಾರದೆ ಮಲಗಿದಾಗ ಬೆಡ್ ಶೀಟ್ ನ್ನೇ ಜಗಿದು ಬಿಡುವ ಅನಿಸುತ್ತಿತ್ತು. ಆದರೆ ಎಲ್ಲವನ್ನೂ ಸಹಿಸಿಕೊಂಡೆ. ಅದ್ಭುತ ಪರಿಣಾಮ ಪಡೆದೆ” ಎಂದು ಕೊಹ್ಲಿ ವಿವರಿಸಿದ್ದಾರೆ.
ಪರಿಣಾಮವಾಗಿ ಕೊಹ್ಲಿ ಸಾಕಷ್ಟು ತೂಕ ಇಳಿಸಿಕೊಂಡರಂತೆ. ಈಗ ಫೀಲ್ಡ್ ನಲ್ಲಿ ಚುರುಕಾಗಿ ಓಡಾಡುವುದಕ್ಕೆ, ಮೂರೂ ಫಾರ್ಮ್ಯಾಟ್ ನಲ್ಲಿ ಮಿಂಚುತ್ತಿರುವುದಕ್ಕೆ ಇದೇ ಶಿಸ್ತು ಬದ್ಧ ಜೀವನ ಕ್ರಮ ಕಾರಣ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ