ಬಹುಶಃ ನಾನಿನ್ನು ಭಾರತ ತಂಡಕ್ಕೆ ಮರಳಲಾರೆ: ಯುವರಾಜ್ ಸಿಂಗ್.

ಗುರುವಾರ, 30 ಅಕ್ಟೋಬರ್ 2014 (17:28 IST)
ಮಹೇಂದ್ರ ಸಿಂಗ್ ನೇತೃತ್ವದಲ್ಲಿ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ಮಾರಕ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದು ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವವಾಗಿದ್ದ ಸ್ಪೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್,  ತಾವು ಮತ್ತೆ ಭಾರತ ತಂಡದಲ್ಲಿ ಆಡುವ ಸಾಧ್ಯತೆಗಳು ಕಡಿಮೆ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ. 

ನಾಲ್ಕು ವರ್ಷಕ್ಕೊಮ್ಮೆ ನಡೆಯುವ ವಿಶ್ವಕಪ್ ಮತ್ತೆ ಸಮೀಪಿಸುತ್ತಿದ್ದು, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ನೀಲಿ ಹುಡುಗರ ತಂಡ ತಯಾರಿ ನಡೆಸುತ್ತಿದ್ದಾರೆ. ಆದರೆ ದುಃಖಕರವಾದ ಸಂಗತಿ ಎಂದರೆ  ಏಕದಿನ ಕ್ರಿಕೆಟ್ ಜಗತ್ತಿನ ಅತ್ಯಂತ ಅಪಾಯಕಾರಿ ಬ್ಯಾಟ್ಸಮನ್‌ಗಳಲ್ಲಿ ಒಬ್ಬರಾದ ಯುವರಾಜ್ ಅವರಿಗೆ, ಸ್ವತಃ  ತಾವು ದೇಶವನ್ನು ಪ್ರತಿನಿಧಿಸುವ ಬಗ್ಗೆ ಖಚಿತತೆ ಇಲ್ಲ.
 
ವಿಸ್ಡನ್ ಇಂಡಿಯಾ ಜತೆ ಮಾತನಾಡುತ್ತಿದ್ದ ಯುವಿ ತಾವು ಭಾರತ ತಂಡದಲ್ಲಿ ಮತ್ತೆ ಆಡಲು ಸಾಧ್ಯವಿಲ್ಲ ಎಂಬುದನ್ನು ಸ್ವತಃ ಒಪ್ಪಿಕೊಂಡರು. ಬಹುಶಃ ನಾನು ಮತ್ತೆ ಭಾರತ ತಂಡಕ್ಕಾಗಿ ಆಡಲು ಸಾಧ್ಯವೇ ಇಲ್ಲ ಎನಿಸುತ್ತದೆ.  ಆದರೆ ನಾನು ಮತ್ತೆ ತಂಡಕ್ಕೆ ಮರಳಲೂ ಬಹುದು. ಆ ಬಗ್ಗೆ  ನನಗೆ ನಂಬಿಕೆ ಇದೆ. ಆ ದಿಶೆಯಲ್ಲಿ ನನ್ನನ್ನು ನಾನು ಸಿದ್ಧಗೊಳಿಸಿಕೊಳ್ಳುತ್ತಿದ್ದೇನೆ  "  ಎಂದು ಅವರು ಹೇಳಿದ್ದಾರೆ.
 
32 ವರ್ಷದ ಎಡಗೈ ಬ್ಯಾಟ್ಸ‌ಮನ್ ಸಿಂಗ್ ಅವರನ್ನು  ಡಿಸೆಂಬರ್ 2013ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಕಳಪೆ ಪ್ರದರ್ಶನದ ನಂತರ ತಂಡದಿಂದ ಕೈ ಬಿಡಲಾಗಿದೆ. 
 
ಐಪಿಎಲ್ -7 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದ  ಯುವಿ ಪ್ರದರ್ಶನ ತಕ್ಕಮಟ್ಟಿಗಿತ್ತಾದರೂ, ಮತ್ತೆ ಭಾರತ ತಂಡಕ್ಕೆ ಮರಳಲು ಅದು ಸಹಕಾರಿಯಾಗಲಿಲ್ಲ. 

ವೆಬ್ದುನಿಯಾವನ್ನು ಓದಿ