ಐಸಿಸಿ ಶ್ರೇಯಾಂಕ: ವಿಶ್ವ ನಂಬರ್ 1 ಟೆಸ್ಟ್ ಆಲ್‌ರೌಂಡರ್‌ ಸ್ಥಾನ ಗಿಟ್ಟಿಸಿದ ಆರ್. ಅಶ್ವಿನ್

ಮಂಗಳವಾರ, 12 ಆಗಸ್ಟ್ 2014 (11:10 IST)
ಮ್ಯಾಂಚೆಸ್ಟರ್‌ನಲ್ಲಿ  ನಡೆದ ಭಾರತ-ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರವಿಚಂದ್ರನ್ ಅಶ್ವಿನ್ ಐಸಿಸಿ ಪ್ರಕಟಿಸಿರುವ ಹೊಸ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಟೆಸ್ಟ್ ಆಲ್‌ರೌಂಡರ್‌ ಎಂದು ಘೋಷಿಸಲ್ಪಟ್ಟಿದ್ದಾರೆ. 

ಮೂರೇ ದಿನಕ್ಕೆ ಅಂತ್ಯ ಕಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಭಾರತ ತಂಡ ಇನಿಂಗ್ಸ್ ಮತ್ತು 54 ರನ್ ಗಳ ಅವಮಾನಕರ  ಸೋಲನ್ನು ಕಂಡಿತಾದರೂ, ಗಮನ ಸೆಳೆಯುವ ಆಟ ಆಡಿದ ಅಶ್ವಿನ್ ಮೊದಲ ಇನಿಂಗ್ಸ್‌ನಲ್ಲಿ 40 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 46 ರನ್ ಗಳಿಸಿದರು. ಇಂಗ್ಲೆಂಡ್‌ನ ಪ್ರಥಮ ಇನ್ನಿಂಗ್ಸ್‌ನಲ್ಲಿ  14 ಓವರ್ ಬೌಲ್ ಮಾಡಿದ ಅವರು ವಿಕೆಟ್ ಪಡೆಯಲು ಸಫಲರಾಗಲಿಲ್ಲ.
 
ಈ ಮೂಲಕ ಭಾರತ ತಂಡದ ಆಫ್ ಸ್ಪಿನ್ನರ್ ಒಟ್ಟು 372 ರೇಟಿಂಗ್ ಅಂಕಗಳನ್ನು ಪಡೆಯುವುದರೊಂದಿಗೆ, 365 ಅಂಕಪಡೆದಿರುವ ದಕ್ಷಿಣ ಆಫ್ರಿಕಾ ತಂಡದ ವೆರ್ನೊನ್ ಫಿಲ್ಯಾಂಡರ್ ಅವರನ್ನು ಹಿಂದಿಕ್ಕಿ ನಂ.1 ಆಲ್‌ರೌಂಡರ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. 
 
ಬಾಂಗ್ಲಾದೇಶ ತಂಡದ ಶಕಿಬ್ ಅಲ್ ಹಸಾನ್,  ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ ಕ್ರಮವಾಗಿ 3 , 4 ಮತ್ತು 5ನೇ  ಸ್ಥಾನದಲ್ಲಿದ್ದಾರೆ. 
 
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ಬದುಕಿನ 10ನೇ ದ್ವಿಶತಕ ದಾಖಲಿಸಿದ ಶ್ರೀಲಂಕಾದ ಹಿರಿಯ ಬ್ಯಾಟ್ಸ್‌ಮನ್ ಕುಮಾರ ಸಂಗಕ್ಕಾರ ತಮ್ಮ ವೃತ್ತಿ ಬದುಕಿನ 10ನೇ ದ್ವಿಶತಕ ಬಾರಿಸುವುದರೊಂದಿಗೆ ಎಬಿ ಡಿ'ವಿಲಿಯರ್ಸ್ ಹೆಸರಿನಲ್ಲಿದ್ದ  ನಂ1 ಬ್ಯಾಟ್ಸಮನ್ ಸ್ಥಾನವನ್ನು ಮರಳಿ ಗಿಟ್ಟಿಸಿದ್ದಾರೆ. ಅವರು 31  ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ.  ಇದೇ ವೇಳೆ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ  ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ.

ವೆಬ್ದುನಿಯಾವನ್ನು ಓದಿ