ವೆಸ್ಟ್ ಇಂಡೀಸ್‌ನಲ್ಲಿ ಈ ಬೇಸಿಗೆಯಲ್ಲಿ ಆಡಲಿರುವ ನಾಲ್ಕು ಟೆಸ್ಟ್ ಪಂದ್ಯಗಳಿಗೆ ವಿರಾಟ್ ಕೊಹ್ಲಿ 17 ಮಂದಿಯ ತಂಡಕ್ಕೆ ಸಾರಥ್ಯ ವಹಿಸಲಿದ್ದಾರೆ. ಬಿಸಿಸಿಐ ಆಯ್ಕೆದಾರರು ಟೆಸ್ಟ್ ತಂಡದಲ್ಲಿ ಅಂತಹ ಬದಲಾವಣೆ ಮಾಡಿಲ್ಲ. ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ವರ್ಷ ಆಡಿದ ನಾಲ್ಕು ಪಂದ್ಯಗಳ ಹಿಂದಿನ ಟೆಸ್ಟ್ ಸರಣಿಯಲ್ಲಿದ್ದ ವರುಣ್ ಆರಾನ್ ಮತ್ತು ಗುರುಕೀರತ್ ಸಿಂಗ್ ಅವರಿಗೆ ಕೊಕ್ ನೀಡಲಾಗಿದ್ದು, ಅವರಿಗೆ ಬದಲಿಯಾಗಿ ಮೊಹಮದ್ ಶಮಿ ಮತ್ತು ಮುಂಬೈ ವೇಗಿ ಶಾರ್ದುಲ್ ಥಾಕುರ್ ಅವರನ್ನು ತರಲಾಗಿದೆ.
ಆರ್. ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಮಿತ್ ಮಿಶ್ರಾ ಭಾರತದ ಬೌಲಿಂಗ್ ದಾಳಿಯಲ್ಲಿ ಸ್ಪಿನ್ ಬೌಲಿಂಗ್ ವಿಭಾಗವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಇಶಾಂತ್ ಶರ್ಮಾ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಶಮಿ ಮತ್ತು ಥಾಕುರ್ ಐವರು ವೇಗದ ಬೌಲರುಗಳು. ಶಮಿ 2015ರ ಜನವರಿಯಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದಾರೆ. ಭಾರತದ ಟಿ 20 ತಂಡಕ್ಕೆ ಮಾರ್ಚ್‌ನಲ್ಲಿ ಅವರು ಕಮ್ ಬ್ಯಾಕ್ ಆಗಿದ್ದಾರೆ.
ಥಾಕುರ್ ಅವರಿಗೆ ಇದು ಮೊದಲ ಟೆಸ್ಟ್ ಕರೆಯಾಗಿದೆ. ಸ್ಥಳೀಯ ಕ್ರಿಕೆಟ್‌ನಲ್ಲಿ ಮುಂಬೈ ವೇಗದ ದಾಳಿಯ ಮುಂಚೂಣಿಯಲ್ಲಿರುವ ಥಾಕುರ್, ಈ ವರ್ಷದ ರಣಜಿ ಟ್ರೋಫಿಯಲ್ಲಿ 41 ವಿಕೆಟ್ ಕಬಳಿಸಿದ್ದಾರೆ. ಒಟ್ಟಾರೆಯಾಗಿ ಥಾಕುರ್ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ 133 ವಿಕೆಟ್ ಕಬಳಿಸಿದ್ದಾರೆ.