ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಎದುರಾಳಿ ಆಸ್ಟ್ರೇಲಿಯಾ

ಶನಿವಾರ, 21 ಮಾರ್ಚ್ 2015 (10:12 IST)
26ರಂದು  ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿರುವ ವಿಶ್ವಕಪ್-2015ರ  2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಶುಕ್ರವಾರ ನಡೆದ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸಿದ ಆಸ್ಟ್ರೇಲಿಯಾ ಸೆಮಿಫೈನಲ್‌ನ್ನು ಪ್ರವೇಶಿಸಿತು. ಕಳೆದ ಗುರುವಾರ ಬಾಂಗ್ಲಾ ವಿರುದ್ಧ ಸುಲಭ ಜಯ ದಾಖಲಿಸಿರುವ ಭಾರತ ಈಗಾಗಲೇ ಸೆಮಿಸ್‌ನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. 
 
ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ ಅಜೇಯವಾಗಿ ಮುನ್ನುಗ್ಗುತ್ತಿರುವ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಆಸ್ಟೇಲಿಯಾ ಎದುರಾಗಲಿದೆ. ವಿಶ್ವಕಪ್ ಚಾಂಪಿಯನ್‌ಶಿಪ್‌ಗೂ ಮುನ್ನ ಟೆಸ್ಟ್ ಮತ್ತು ತ್ರಿಕೋನ ಸರಣಿ ಎರಡರಲ್ಲೂ ಭಾರತವನ್ನ ಮಣಿಸಿದ್ದ ಆಸ್ಟ್ರೇಲಿಯಾ ಭಾರತ ತಂಡಕ್ಕೆ ಮಣ್ಣುಮುಕ್ಕಿಸುವ ಆತ್ಮವಿಶ್ವಾಸದಲ್ಲಿದೆ.
 
ಆದರೆ, ಸೋಲಿನ ಕಂದಕದಿಂದ ಮೈಕೊಡವಿ ಮೇಲೆದ್ದಿರುವ ಭಾರತ ವಿಶ್ವಕಪ್ ಪಂದ್ಯಾವಳಿಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡು ವಿಭಾಗಗಳಲ್ಲೂ ಅದ್ಭುತ ಪ್ರದರ್ಶನ ನೀಡಿದೆ. ಎಲ್ಲ ಪಂದ್ಯಗಳಲ್ಲೂ ಎದುರಾಳಿ ತಂಡವನ್ನು ಆಲ್ ಔಟ್ ಮಾಡಿದೆಯಲ್ಲದೇ ಬ್ಯಾಟಿಂಗ್‌ನಲ್ಲೂ ಸಹ ಮಿಂಚಿದೆ. ಒಟ್ಟಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹೈ ಓಲ್ಟೇಜ್ ಪಂದ್ಯ ನಡೆಯುವ ನಿರೀಕ್ಷೆ ಇದೆ. 

ವೆಬ್ದುನಿಯಾವನ್ನು ಓದಿ