ಕುಲದೀಪ್ ಯಾದವ್ ಮೇಲೆ ಕಣ್ಣಿರಿಸಲು ಭಾರತದ ಆಯ್ಕೆದಾರರಿಗೆ ಗವಾಸ್ಕರ್ ಕರೆ

ಗುರುವಾರ, 26 ಮೇ 2016 (12:44 IST)
2016ರ ಐಪಿಎಲ್‌ನಲ್ಲಿ ಕುಲದೀಪ್ ಯಾದವ್ ಪ್ರದರ್ಶನವನ್ನು ಗಮನಿಸಿದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಯುವ ಎಡಗೈ ಸ್ಪಿನ್ನರ್ ಮೇಲೆ ಕಣ್ಣಿರಿಸುವಂತೆ ಭಾರತದ ಆಯ್ಕೆದಾರರಿಗೆ ಪ್ರಾಮಾಣಿಕ ಸಲಹೆಯನ್ನು ನೀಡಿದ್ದಾರೆ. ಪಿಯುಶ್ ಚಾವ್ಲಾ ಬದಲಿಗೆ ಆಡುತ್ತಿರುವ ಯಾದವ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅಚ್ಚರಿಯ ಅಸ್ತ್ರವಾಗಿ ತಿರುಗಿ ಸನ್ ರೈಸರ್ಸ್ ವಿರುದ್ಧ 22 ರನ್‌ಗಳಿಂದ ಗೆದ್ದು ಪ್ಲೇ ಆಫ್ ಸ್ಥಾನಕ್ಕೆ ನೈಟ್ ರೈಡರ್ಸ್ ಅವಕಾಶ ಪಡೆದಿತ್ತು.
 
 ಬುಧವಾರ ಎಲಿಮಿನೇಟರ್ ಪಂದ್ಯದಲ್ಲಿ ಕೂಡ ಕುಲದೀಪ್ 3/35 ಬೌಲಿಂಗ್ ಅಂಕಿಅಂಶದಿಂದ ಮಿಂಚಿದ್ದರು. ಕುಲದೀಪ್ ಮುಂದೆ ಪಂದ್ಯಗಳನ್ನು ಗೆದ್ದುಕೊಡುವ ಬೌಲರ್ ಆಗಬಹುದು. ಅವರ ಮೇಲೆ ಒಂದು ಕಣ್ಣಿರಿಸಬೇಕು ಎಂದು ಗವಾಸ್ಕರ್ ಹೇಳಿದರು. 
 ಏತನ್ಮಧ್ಯೆ ವಿರಾಟ್ ಕೊಹ್ಲಿ ಗುಜರಾತ್ ಲಯನ್ಸ್ ವಿರುದ್ಧ ಕ್ವಾಲಿಫೈಯರ್ 1 ರ ಸಂದರ್ಭದಲ್ಲಿ ನಾಲ್ಕನೇ ಅಂಪೈರ್ ಬಳಿ ತೆರಳಿ ಮಾತನಾಡಿದ್ದಕ್ಕೆ ಹೆಚ್ಚು ಅರ್ಥ ನೀಡಬಾರದು ಎಂದು ಗವಾಸ್ಕರ್ ಹೇಳಿದರು.
 
ಕೊಹ್ಲಿ ಮಿತಿ ಮೀರಿ ಪ್ರತಿಕ್ರಿಯಿಸಿದರೇ ಎಂಬ ಪ್ರಶ್ನಗೆ ತಾವು ಹಾಗೆಂದು ಭಾವಿಸುವುದಿಲ್ಲ. ಏನಾಗುತ್ತಿದೆ ಎಂದು ಕೇಳಲು ಅವರು ಅಂಪೈರ್ ಬಳಿ ತೆರಳಿದ್ದರು. ಒಂದು ನಿರ್ದಿಷ್ಟ ತೀರ್ಪಿನ ಯುಕ್ತಾಯುಕ್ತತೆ ಕುರಿತು ಕೆಲವು ಬಾರಿ ನಾಯಕ ಮತ್ತು ಕೋಚ್‌ಗಳು ತಿಳಿಯಲು ಬಯಸುತ್ತಾರೆ ಎಂದು ಹೇಳಿದರು. ಕೊಹ್ಲಿ ಸ್ಪಷ್ಟೀಕರಣ ಬಯಸಿದ್ದರು.

ಅಂಪೈರ್‌ಗಳು ಅದಕ್ಕೆ ಸ್ಪಷ್ಟೀಕರಣ ನೀಡಬಹುದು ಅಥವಾ ಅದನ್ನು ತಳ್ಳಿ ಹಾಕಿ ನಮ್ಮ ಕೆಲಸವನ್ನು ನಾವು ಮಾಡುತ್ತೇವೆ, ನಿಮ್ಮ ಕೆಲಸ ನೀವು ಮಾಡಿ ಎಂದು ಹೇಳಬಹುದು ಎಂದು ಗವಾಸ್ಕರ್ ತಿಳಿಸಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ