ಗೇಲ್ ಅಬ್ಬರದಲ್ಲಿ ಗೆಲುವಿನ ದಡ ಸೇರಿದ ರಾಯಲ್‌ ಚಾಲೆಂಜರ್ಸ್‌

ಭಾನುವಾರ, 12 ಏಪ್ರಿಲ್ 2015 (16:54 IST)
ಸ್ಪೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್‌  ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡವನ್ನು ಮಣಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ  ಐಪಿಎಲ್‌ ಕ್ರಿಕೆಟ್‌ ಟೂರ್ನಿಯ 8 ನೇ ಸೀಸನ್‌ನಲ್ಲಿ  ಶುಭಾರಂಭ ಮಾಡಿದೆ. 

ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನೈಟ್‌ ರೈಡರ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 177 ರನ್‌‌ಗಳ ಉತ್ತಮ ಮೊತ್ತ ದಾಖಲಿಸಿತು. ಇದನ್ನು ಬೆನ್ನಟ್ಟಿದ ವಿರಾಟ್‌ ಕೊಹ್ಲಿ ಬಳಗ 7 ನಷ್ಟಕ್ಕೆ ಗುರಿ ತಲುಪಿತು.
 
ಟಾಸ್​​ ಗೆದ್ದ ಕೊಹ್ಲಿ ಕೋಲ್ಕತ್ತಾ ತಂಡವನ್ನು ಬ್ಯಾಟಿಂಗ್‌ಗಿಳಿಸಿದರು. ತಂಡಕ್ಕೆ ಉತ್ತಮ ಆರಂಭ ನೀಡಿದ ಕನ್ನಡಿಗ ರಾಬಿನ್ ಉತ್ತಪ್ಪ ಹಾಗೂ ನಾಯಕ ಗಂಭೀರ್​​ ಜತೆಯಾಗಿ 81 ರನ್​​ ಕಲೆ ಹಾಕಿದರು. ಗಂಭೀರ್​​ 58 ರನ್​​ ಬಾರಿಸಿ ಔಟಾದ ಬಳಿಕ ಪಾಂಡೆ (23) ಅಬ್ಬರಿಸಿದರಾದರೂ ರನ್ ಔಟ್ ಆಗಿ ಮರಳಿದರು. ನಂತರ ಬಂದ ಸೂರ್ಯಕುಮಾರ್​​ ಯಾದವ್ (11)​​ ಮತ್ತು ಯುಸೂಫ್ ಪಠಾಣ(3)ನಿರಾಶೆ ಮೂಡಿಸಿದರು. ಕೊನೆಯಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಆ್ಯಂಡ್ರೆ ಔಟಾಗದೇ 41 ರನ್ ಗಳಿಸಿದರು. 
 
ಕೋಲ್ಕತ್ತಾ ನೈಟ್​​ ರೈಡರ್ಸ್​​​ ನೀಡಿದ  178 ರನ್’​ಗಳ ಗುರಿ ಬೆನ್ನಟ್ಟಿದ ಆರ್‌​​ಸಿಬಿ ಆರಂಭದಿಂದಲೇ ಇಕ್ಕಟ್ಟಿಗೆ ಸಿಲುಕಿತು. ನಾಯಕ ವಿರಾಟ್‌ ಕೊಹ್ಲಿ ಕೇವಲ 13 ರನ್‌ಗೆ ಪೆವಿಲಿಯನ್‌ಗೆ ಮರಳಿದರೆ, ದಿನೇಶ್‌ ಕಾರ್ತಿಕ್‌, ಮನದೀಪ್ ಸಿಂಗ್ ತಲಾ 6ರ ಅಂಕಿಗೆ ಬ್ಯಾಟ್ ಕೆಳಗಿಸಿದರು. 
 
ಆದರೆ ಏಕಾಂಗಿಯಾಗಿ ಹೋರಾಟ ನಡೆಸಿದ ಕ್ರಿಸ್ ​​ಗೇಲ್​​ ತಮ್ಮ ಎಂದಿನ ಶೈಲಿಯಲ್ಲಿ ಸಿಡಿದು ನಿಂತರು. ನೈಟ್ ರೈಡರ್ಸ್ ಬೌಲಿಂಗ್‌ನ ಚಿಂದಿ ಉಡಾಯಿಸಿದ ಅವರು 56 ಎಸೆತಗಳಲ್ಲಿ 96 ರನ್ ಗಳಿಸಿದರು. ಏಳು ಬೌಂಡರಿ ಮತ್ತು ಏಳು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ಅವರು ಆರ್‌ಸಿಬಿಯನ್ನು ಗೆಲುವಿನ ದಡಕ್ಕೆ ಸೇರಿಸುತ್ತಿದ್ದಾರೆ ಎನ್ನುವಷ್ಟರಲ್ಲಿ ರನ್ ಔಟ್ ಆಗಿ ವಾಪಸ್ಸಾದರು​​​. ನಂತರ ಬಂದ ಬಾಲಂಗೋಚಿಗಳು ವಿರಾಟ್ ಅವರನ್ನು ನಿರಾಶೆಗೊಳಿಸಲಿಲ್ಲ. ಇನ್ನೊಂದು ಓವರ್​​ ಬಾಕಿ ಇರುವಂತೆಯೇ 7 ವಿಕೆಟ್​​ ನಷ್ಟಕ್ಕೆ 179 ರನ್ ಗಳಿಸಿ ಬೆಂಗಳೂರು ಗೆಲುವನ್ನು ತನ್ನದಾಗಿಸಿಕೊಂಡಿತು.
 
ಆರ್‌ಸಿಬಿಯ ಗೆಲುವಿಗೆ ಕಾರಣರಾದ ಗೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಕೊಂಡರು.

ವೆಬ್ದುನಿಯಾವನ್ನು ಓದಿ