ಐಪಿಎಲ್ 2017ನೇ ಆವೃತ್ತಿ ವಿದೇಶದಲ್ಲಿ ಆಡಿಸುವ ಸಾಧ್ಯತೆ ಪರಿಶೀಲನೆ

ಗುರುವಾರ, 21 ಏಪ್ರಿಲ್ 2016 (18:21 IST)
2017ನೇ ಐಪಿಎಲ್ ಆವೃತ್ತಿಯನ್ನು ವಿದೇಶದಲ್ಲಿ ಆಡಿಸಬಹುದೇ ಎಂಬ ಕುರಿತು ಐಪಿಎಲ್ ಆಡಳಿತ ಮಂಡಳಿಯ ಸದಸ್ಯರು ಪರಿಶೀಲನೆ ನಡೆಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಬಹಿರಂಗ ಮಾಡಿದ್ದಾರೆ.  ಐಪಿಎಲ್ ಆಡಳಿತ ಮಂಡಳಿಯು ಭಾರತ ಮತ್ತು ವಿದೇಶಗಳಲ್ಲಿ ಪಿಚ್‌ಗಳ ಲಭ್ಯತೆ ಕುರಿತು ಪರಿಶೀಲನೆ ನಡೆಸುತ್ತಿದೆ. ನಾವು ಪಿಚ್ ಲಭ್ಯತೆ ಕುರಿತು ಮತ್ತು ಪ್ರಸಕ್ತ ಸ್ಥಿತಿಗತಿಗಳ ಕುರಿತು ಪರಿಶೀಲನೆ ಮಾಡಬೇಕು ಎಂದು ಬಿಸಿಸಿಐ ದೆಹಲಿ ಮುಖ್ಯಕಚೇರಿಯಲ್ಲಿ ಪತ್ರಕರ್ತರ ಜತೆ ಸಂವಾದದಲ್ಲಿ ಠಾಕುರ್ ಹೇಳಿದರು. 
 
ಐಪಿಎಲ್ ಪಂದ್ಯಗಳನ್ನು ಎರಡು ಬಾರಿ ಭಾರತದ ಹೊರಗೆ ನಡೆಸಲಾಗಿತ್ತು.  2009ರಲ್ಲಿ ಲೀಗನ್ನು ಇಡೀ ಅವಧಿಗೆ ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು.  2014ರಲ್ಲಿ ಮೊದಲ 15 ದಿನಗಳ ಐಪಿಎಲ್ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಡಿಸಲಾಗಿತ್ತು. 
 
 ಬಿಸಿಸಿಐ ಕೋಶಾಧಿಕಾರಿ ಅನಿರುದ್ ಚೌಧರಿ ನಾಲ್ಕು ದಿನಗಳ ಹಿಂದೆ ಟ್ವೀಟ್ ಮಾಡಿ, ಇದೇ ರೀತಿ ಮುಂದುವರಿದರೆ ಶೀಘ್ರದಲ್ಲೇ ಐಪಿಎಲ್ ಪಂದ್ಯಾವಳಿಯನ್ನು ದೇಶದ ಹೊರಗೆ ಆಡಿಸಲಾಗುತ್ತದೆ ಎಂದು ಹೇಳಿರುವುದು ಬಿಸಿಸಿಐ ಉನ್ನತ ಅಧಿಕಾರಿಗಳು ಈ ವಿಷಯವಾಗಿ ಪರಿಶೀಲನೆ ನಡೆಸುತ್ತಿರುವುದಕ್ಕೆ ಸಾಕ್ಷಿಯೊದಗಿಸಿದೆ.
 
 ಐಪಿಎಲ್‌ಗೆ ಆರಂಭದಿಂದಲೂ ಒಂದಲ್ಲ ಒಂದು ವಿವಾದ ಅಪ್ಪಳಿಸಿದ್ದು, ಈ ಆವೃತ್ತಿಯಲ್ಲಿ ಅನೇಕ ಪಿಐಎಲ್‌ಗಳಿಂದ ಐಪಿಎಲ್ ದಾರಿಯನ್ನು ಕಗ್ಗಂಟಾಗಿಸಿದೆ. ಈಗಾಗಲೇ 12 ಐಪಿಎಲ್ ಪಂದ್ಯಗಳನ್ನು ಬರಪೀಡಿತ ಮಹಾರಾಷ್ಟ್ರದಿಂದ ಸ್ಥಳಾಂತರಿಸುವಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.
 
ಜಾಹೀರಾತು ಮೊಟಕುಗೊಳಿಸುವ ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದರೆ, ಬಿಸಿಸಿಐ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ತಿಳಿಸಿದರು. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದರೆ, ಮಾಜಿ ಆಟಗಾರರಿಗೆ ನೀಡುವ ಪಿಂಚಣಿಯನ್ನು ಪುನರ್ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಠಾಕುರ್ ಹೇಳಿದರು. 
 
 ಲೋಧಾ ಸಮಿತಿ ಶಿಫಾರಸುಗಳನ್ನು ಪ್ರಸಕ್ತ ರೂಪದಲ್ಲಿ ಅನುಷ್ಠಾನಕ್ಕೆ ತಂದರೆ 2017ರ ನಂತರ ಪ್ರಸಾರ ಹಕ್ಕುಗಳ ಮೌಲ್ಯ ಕೂಡ ಗಮನಾರ್ಹವಾಗಿ ಕುಂಠಿತವಾಗುತ್ತದೆ.  ಬಿಸಿಸಿಐ ವಾರ್ಷಿಕ ಆದಾಯದಲ್ಲಿ ಶೇ. 26ರಷ್ಟು ವೇತನ ಪಡೆಯುತ್ತಿರುವ ಪ್ರಸಕ್ತ ಆಟಗಾರರು ಕೂಡ ವೇತನ ಕಡಿತ ಎದುರಿಸಬೇಕಾಗುತ್ತದೆ. 

ತಾಜಾಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ