ಯುವತಿ ಮೇಲೆ ಹಲ್ಲೆ ಕೇಸು: ಅಮಿತ್ ಮಿಶ್ರಾ ವಿರುದ್ಧ ತನಿಖೆಗೆ ಹೈಕೋರ್ಟ್ ಒಪ್ಪಿಗೆ

ಬುಧವಾರ, 23 ನವೆಂಬರ್ 2016 (10:55 IST)
ಬೆಂಗಳೂರು: ತಮ್ಮ ಹೋಟೆಲ್ ಕೊಠಡಿಗೆ ಬಂದ ಯುವತಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಲು ರಾಜ್ಯ ಹೈಕೋರ್ಟ್ ಒಪ್ಪಿಗೆ ನೀಡಿದೆ. ಈ ಮೊದಲು ಕೆಳ ಹಂತದ ನ್ಯಾಯಾಲಯ ವಿಚಾರಣೆ ನಡೆಸಲು ಹೈಕೋರ್ಟ್ ತಡೆಯಾಜ್ಞೆ ನಡೆಸಿತ್ತು. ಅದನ್ನೀಗ ತೆರವುಗೊಳಿಸಿದೆ.

ಇದರಿಂದ ಮತ್ತೆ ಅಮಿತ್ ಮಿಶ್ರಾ ಕೋರ್ಟ್ ಕಚೇರಿ ಎಂದು ಅಲೆಯುವ ಪರಿಸ್ಥಿತಿ ಬಂದಿದೆ. 2015 ರಲ್ಲಿ ಈ ಘಟನೆ ನಡೆದಿತ್ತು. ಅಂದು ತರಬೇತಿಗೆಂದು ಬೆಂಗಳೂರಿಗೆ ಬಂದಿದ್ದ ಮಿಶ್ರಾ ಹೊಟೇಲ್ ಕೊಠಡಿಯಲ್ಲಿ ತಂಗಿದ್ದರು. ಅಲ್ಲಿಗೆ ಮಿಶ್ರಾ ಗೆಳತಿ ಎನ್ನಲಾದ ಯುವತಿ ಬಂದಾಗ ಆಕೆಯ ಮೇಲೆ ಮಿಶ್ರಾ ದೈಹಿಕ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯವಾಗಿ ನಿಂದಿಸಿದ್ದರು ಎಂದು ಬೆಂಗಳೂರು ಪೊಲೀಸರಿಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿತ್ ಮಿಶ್ರಾರನ್ನು ಬಂಧಿಸಿದ್ದ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಮಿಶ್ರಾ ಪರ ವಕೀಲರು ಹೈ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಇಷ್ಟು ದಿನ ನ್ಯಾಯಾಲಯ ವಿಚಾರಣೆಗೆ ತಡೆಯೊಡ್ಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ