ಆಸ್ಟ್ರೇಲಿಯಾ ಪ್ರವಾಸದಿಂದ ಸಾಕಷ್ಟು ಕಲಿತಿದ್ದೇನೆ: ಕೊಹ್ಲಿ

ಭಾನುವಾರ, 7 ಜೂನ್ 2015 (16:24 IST)
ನಾಳೆಯಿಂದ ಭಾರತ ಕ್ರಿಕೆಟ್ ತಂಡ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ 3 ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯವನ್ನು ತಂಡ ಆಡಲಿದೆ. ಕೋಲ್ಕತ್ತಾದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಕೊಹ್ಲಿ, ಬಾಂಗ್ಲಾದಿಂದ ತಮ್ಮ ತಂಡ ವಿಜಯಶಾಲಿಯಾಗಿ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಬಾಂಗ್ಲಾ ಪ್ರವಾಸಕ್ಕೆ ನಮ್ಮ ತಂಡ ಸಿದ್ಧವಾಗಿದೆ. ನಮ್ಮಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಬಾಂಗ್ಲಾ ತಂಡದ ವಿರುದ್ಧ ನಾವು ಉತ್ತಮ ಪ್ರದರ್ಶನ ನೀಡಲಿದ್ದೇವೆ", ಎಂದು ಕೊಹ್ಲಿ ಹೇಳಿದ್ದಾರೆ.
 
"ಏಕದಿನ ಮತ್ತು ಟಿ20 ಪಂದ್ಯಗಳಿಗೆ ಹೋಲಿಸಿದರೆ ಟೆಸ್ಟ್ ಪಂದ್ಯಗಳನ್ನು ನಿಭಾಯಿಸುವುದು ಸಾಕಷ್ಟು ಸವಾಲಿನದ್ದು. ಟೆಸ್ಟ್ ಪಂದ್ಯಗಳಿಗೆ ಸಂಪೂರ್ಣ ದಿನ ಯೋಜನೆ ರೂಪಿಸಬೇಕಾಗುತ್ತದೆ. ಆಸ್ಟ್ರೇಲಿಯಾ ಪ್ರವಾಸದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಬಾಂಗ್ಲಾದಲ್ಲಿ ಸಹ ತಂಡವನ್ನು ಸಮರ್ಥವಾಗಿ ಮುನ್ನಡೆಸಲಿದ್ದೇನೆ", ಎಂದು ಕೊಹ್ಲಿ ಭರವಸೆ ನೀಡಿದ್ದಾರೆ.
 
ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಟೆಸ್ಟ್ ತಂಡ ಸೋಮವಾರ ಕೋಲ್ಕತಾದಿಂದ ಢಾಕಾಕ್ಕೆ ಪ್ರಯಾಣ ಬೆಳೆಸಲಿದೆ. ಬಾಂಗ್ಲಾದ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಜೂನ್ 10ರಂದು ಆರಂಭಗೊಳ್ಳಲಿದೆ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೂಡ ಭಾರತ ತಂಡ ಆಡಲಿದೆ. 
 
ಕರ್ನಾಟಕದ ಪ್ರತಿಭಾವಂತ ಆರಂಭಿಕ ಬ್ಯಾಟ್ಸ್‌ಮನ್ ಕೆ. ಎಲ್. ರಾಹುಲ್ ಅನಾರೋಗ್ಯದ ಕಾರಣದಿಂದ ತಂಡದಿಂದ ಹೊರಗುಳಿಯುವಂತಾಗಿದೆ.

ವೆಬ್ದುನಿಯಾವನ್ನು ಓದಿ