ಬೈಬೈ ಹೇಳಿದ ಬಾಲಾಜಿ

ಶುಕ್ರವಾರ, 16 ಸೆಪ್ಟಂಬರ್ 2016 (09:27 IST)
ಭಾರತ ತಂಡದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ ಗುರುವಾರ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ತಮಿಳುನಾಡು ಮೂಲದ ಆಟಗಾರ ಸದ್ಯ ಟುಟಿ ಪೆಟ್ರಿಯಾಟ್ಸ್ ಪರ ತಮಿಳುನಾಡು ಪ್ರಿಮಿಯರ್ ಲೀಗ್‌ನಲ್ಲಿ ಆಡುತ್ತಿದ್ದು ಐಪಿಎಲ್, ಟಿಎನ್‌ಪಿಎಲ್‌ನಂತಹ ಟಿ20 ಲೀಗ್ ಪಂದ್ಯಾವಳಿಗಳಲ್ಲಿ ಮುಂದುವರೆಯಲು ನಿರ್ಧರಿಸಿದ್ದಾರೆ. 
 
ಕಳೆದ 16 ವರ್ಷದಿಂದ ಪ್ರಥಮ ದರ್ಜೆ ಕ್ರಿಕೆಟ್‌ಗೆ ನನ್ನನ್ನು ತೊಡಗಿಸಿಕೊಂಡಿದ್ದೆ. ಈಗ ಕುಟುಂಬದ ಜತೆ ಕಳೆಯ ಬಯಸುತ್ತೇನೆ. ನನಗೆ ಮಾರ್ಗದರ್ಶನ ನೀಡಿದ ಎಲ್ಲ ತರಬೇತುದಾರರು, ಕ್ರಿಕಟರ್‌ಗಳು ಮತ್ತು ಟಿಎನ್‌ಸಿಎಗೆ ನಾನು ಧನ್ಯವಾದಗಳನ್ನು ಹೇಳ ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. 
 
34 ವರ್ಷದ ಬಾಲಾಜಿ ಅವರು 2003ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2004ರಲ್ಲಿ ಪಾಕಿಸ್ತಾನ ಭಾರತಕ್ಕೆ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಅತ್ಯಮೋಘ ಪ್ರದರ್ಸನ ನೀಡಿದ್ದ ಅವರು ಫೈನಲ್ ಟೆಸ್ಟ್ ಪಂದ್ಯದಲ್ಲಿ ಲೆಜೆಂಡರಿ ಆಟಗಾರ ಇಂಜಮಾಮ್ ಉಲ್ ಹಕ್ ಸೇರಿದಂತೆ 7 ವಿಕೆಟ್ ಬಲಿ ಪಡೆದು ಭಾರತ ಸರಣಿಯನ್ನು 2-1ರಿಂದ ಗೆಲ್ಲಲು ಕಾರಣೀಭೂತರಾಗಿದ್ದರು.  
 
ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಿದ್ದುದು ಅವರ ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ತೊಡಕಾಗಿ ಪರಿಣಮಿಸಿತು. 
 
ಭಾರತದ ಪರ ಅವರು 8 ಟೆಸ್ಟ್ ಪಂದ್ಯ ಮತ್ತು 30 ಏಕದಿನ ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 27 ಮತ್ತು 34 ವಿಕೆಟ್ ಕಬಳಿಸಿದ್ದಾರೆ. ತಮಿಳುನಾಡು ಪರ 106 ಪಂದ್ಯಗಳಿಂದ 330 ವಿಕೆಟ್ ಕಬಳಿಸಿದ್ದಾರೆ. 
 
ಐಪಿಎಲ್‌ನಲ್ಲಿ ಅವರು ಚೆನ್ನೈ, ಕೆಕೆಆರ್ ಮತ್ತು ಪಂಜಾಬ್ ಪರ ಆಡಿದ ಅನುಭವ ಹೊಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ