ನಿವೃತ್ತಿಯ ನಂತರದ ಜೀವನ ಒತ್ತಡ ತಂದಿದೆ: ಸಚಿನ್ ತೆಂಡೂಲ್ಕರ್

ಬುಧವಾರ, 12 ನವೆಂಬರ್ 2014 (16:13 IST)
ವಿಶ್ವದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ತಮ್ಮ ಹೆಚ್ಚಿನ ಅಭಿಮಾನಿಗಳಿಗೆ ದೇವರಾಗಿರಬಹುದು. ಆದರೆ ತಾನೊಬ್ಬ "ಸಾಮಾನ್ಯ" ವ್ಯಕ್ತಿ ಎಂಬುದನ್ನವರು ಒತ್ತಿ ಹೇಳಿದ್ದಾರೆ.

ಕ್ರೀಡಾ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಸಚಿನ್ ನಾನು ಕ್ರಿಕೆಟ್ ದೇವರಲ್ಲ. ನಾನು ಕೂಡ ಮೈದಾನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇನೆ. ನಾನು ಕ್ರಿಕೆಟ್ ಆಡುವುದನ್ನು ಪ್ರೀತಿಸಿದ್ದೇನೆ. ಆದರೆ ನಾನು ಸಾಮಾನ್ಯ ಸಚಿನ್ ಎಂದರು.
 
ಹೀರೋ ವರ್ಶಿಪ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿನ್ ಜನರು ನನ್ನನ್ನು ಇಷ್ಟಪಡುವುದು ನನ್ನ ಅದೃಷ್ಟ ಎಂದು ಪರಿಗಣಿಸುತ್ತೇನೆ. ಅಭಿಮಾನಿಗಳ ಪ್ರೀತಿ ನನ್ನ ಪಾಲಿಗೆ ವಿಶೇಷವಾದುದು. ನಾನು ಧನ್ಯತೆಯನ್ನು ಅನುಭವಿಸುತ್ತಿದ್ದೇನೆ. ದೇವರು ನನ್ನ ಮೇಲೆ ಅತಿಯಾದ ಕರುಣೆಯನ್ನು ತೋರಿದ್ದಾನೆ. ನಾನು ಏನನ್ನು ಕೂಡ ಲಘುವಾಗಿ ತೆಗೆದುಕೊಳ್ಳಲು ಬಯಸುವುದಿಲ್ಲ. ನನ್ನ ಕುರಿತು ಪ್ರೀತ್ಯಾದರ ತೋರಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಆದರೆ ಅವರ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಹೇಳಿದ್ದಾರೆ.
 
ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿರುವ ಹೆಗ್ಗಳಿಕೆ ಹೊಂದಿರುವ ಮಾಸ್ಟರ್- ಬ್ಲಾಸ್ಟರ್  ತಮ್ಮ ಆತ್ಮಚರಿತ್ರೆಯ ಅಧಿಕೃತ ಬಿಡುಗಡೆಗಾಗಿ ಕಳೆದ ವಾರ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿದ್ದರು.
 
ನಿವೃತ್ತಿಯ ನಂತರದ ಬದುಕು ಹೇಗಿದೆ ಎಂಬ ಸವಾಲಿಗೆ ಒತ್ತಡಮಯವಾಗಿದೆ ಎಂದು ಅವರು ಉತ್ತರಿಸಿದರು.
 
ಬದುಕಿನ ಮತ್ತೊಂದು ಮಗ್ಗಲನ್ನು ನೋಡುತ್ತಿದ್ದೇನೆ. ಕಳೆದ 24 ವರ್ಷ ನಾನು ಕೇವಲ ಕ್ರಿಕೆಟ್ ಮೇಲಷ್ಟೇ ಗಮನ ಹರಿಸಿದ್ದೆ.  ನನ್ನ ಬದುಕಿನ ಮೊದಲ ಇನ್ನಿಂಗ್ಸ್  ಕ್ರಿಕೆಟ್ ಆಟವಾಡಿದ್ದು ಮತ್ತು ನನ್ನ ಕನಸಿನ ಬೆನ್ನು ಹತ್ತಿದ್ದು. ಆ ಕನಸು ವಿಶ್ವ ಕಪ್ ಗೆಲ್ಲುವುದಾಗಿತ್ತು. ನನ್ನ ಬದುಕಿನ ಎರಡನೇ ಇನ್ನಿಂಗ್ಸ್ ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರದ ದಿನಗಳು. ಈ ಇನ್ನಿಂಗ್ಸ್‌ನಲ್ಲಿ ನಾನು ನನಗೆ ಒಳಿತಾಗಲಿ ಎಂದು ಹರಸಿದವರಿಗೆ ಕೃತಜ್ಞತಾಪೂರ್ಣವಾಗಿ ಏನಾದರೂ ಹಿಂತಿರುಗಿಸ ಬಯಸುತ್ತೇನೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ