500 ಅಡಿ ಜಾಗಕ್ಕಾಗಿ ಮಿಥಾಲಿ ರಾಜ್ ರನ್ನು ಸತಾಯಿಸುತ್ತಿದೆಯಾ ಸರ್ಕಾರ?!
ಶನಿವಾರ, 29 ಜುಲೈ 2017 (08:54 IST)
ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ವಿಶ್ವಕಪ್ ಫೈನಲ್ ವರೆಗೆ ತಲುಪಿಸಿದ ನಾಯಕಿ ಮಿಥಾಲಿ ರಾಜ್ ಗೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ತವರಿನ ತೆಲಂಗಾಣ ಸರ್ಕಾರ ಮಾತ್ರ ಮಹಿಳಾ ಕ್ರಿಕೆಟ್ ಗೆ ಹೊಸದೊಂದು ದಿಕ್ಸೂಚಿ ನೀಡಿದ ತಾರೆಗೆ ಕನಿಷ್ಠ ಗೌರವವೂ ಕೊಡುತ್ತಿಲ್ಲವೇ?
ಇತರ ಮಹಿಳಾ ಆಟಗಾರರಿಗೆ ಅವರವರ ತವರು ರಾಜ್ಯಗಳ ಸರ್ಕಾರ ನಗದು ಬಹುಮಾನ, ನೌಕರಿ ಘೋಷಿಸಿ ಗೌರವ ತೋರಿಸಿದೆ. ಆದರೆ ಮಿಥಾಲಿಗೆ ತೆಲಂಗಾಣ ಸರ್ಕಾರ ಇದುವರೆಗೆ ಕನಿಷ್ಠ ಶುಭಾಷಯ ಹೇಳುವ ಪ್ರಯತ್ನವನ್ನೂ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಷ್ಟೇ ಅಲ್ಲ, 2005 ರ ವಿಶ್ವಕಪ್ ಫೈನಲ್ ತಲುಪಿದ್ದಕ್ಕೆ ಅಂದು ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ 500 ಚದರ ಅಡಿಯ ನಿವೇಶನ ಘೋಷಣೆ ಮಾಡಿದ್ದರು. ಆದರೆ ಮಿಥಾಲಿ ಪೋಷಕರು ಸಿಎಂ ಮತ್ತು ಅಧಿಕಾರಿಗಳ ಬಳಿಗೆ ಅಲೆದೂ ಅಲೆದು ಬೇಸತ್ತರೇ ಹೊರತು ನಿವೇಶನ ಸಿಕ್ಕಿಲ್ಲ ಎಂದು ಆಂಗ್ಲ ಪತ್ರಿಕೆಯೊಂದರಲ್ಲಿ ಆರೋಪಿಸಲಾಗಿದೆ.
ತೆಲಂಗಾಣ ಸರ್ಕಾರದ ವತಿಯಿಂದ ಬ್ಯಾಡ್ಮಿಂಟನ್ ನಲ್ಲಿ ಸಾಧನೆ ಮಾಡಿದ್ದ ಪಿವಿ ಸಿಂಧು ಮತ್ತು ಸಾನಿಯಾ ಮಿರ್ಜಾಗೆ ಕೋಟಿಗಟ್ಟಲೆ ಹಣ, ನಿವೇಶನ ಸಿಕ್ಕಿರುವಾಗ ಮಿಥಾಲಿಗೆ ಮಾತ್ರ ಸುಣ್ಣ ಸವರುತ್ತಿರುವುದೇಕೆ ಎಂಬುದೇ ಅಭಿಮಾನಿಗಳ ಪ್ರಶ್ನೆಯಾಗಿದೆ.