ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಬಗ್ಗೆ ಸಚಿನ್ ಹೇಳಿದ್ದೇನು?

ಗುರುವಾರ, 13 ನವೆಂಬರ್ 2014 (13:04 IST)
ತಮ್ಮ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಕುರಿತು ಅಪರೂಪಕ್ಕೆ ಮಾತನಾಡಿರುವ ಸಚಿನ್ ತೆಂಡೂಲ್ಕರ್ ನಾವಿಬ್ಬರು ಭಿನ್ನ ಜೀವನ ಶೈಲಿ ಹೊಂದಿರುವ ವಿಭಿನ್ನ ವ್ಯಕ್ತಿಗಳು ಎಂದು ಹೇಳಿದ್ದಾರೆ.

ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ ವಿಶ್ವ ದಾಖಲೆಯ ಮಳೆಯನ್ನೇ ಸುರಿಸಿದರು. ಆದರೆ 1993 ರಲ್ಲಿ  ಇಂಗ್ಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧ ಒಂದರ ಹಿಂದೆ ಒಂದು ದ್ವಿಶತಕವನ್ನು  ದಾಖಲಿಸುವುದರ ಮೂಲಕ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನವನ್ನು, ಅದ್ಭುತವಾಗಿ ಆರಂಭಿಸಿದ್ದ ಕಾಂಬ್ಳಿ ನಂತರ ತನ್ನ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾದರು.
 
ಪ್ರಮುಖ ಇಂಗ್ಲೀಷ್ ದೈನಿಕವೊಂದರ ಜತೆ ಮಾತನಾಡುತ್ತಿದ್ದ ತೆಂಡೂಲ್ಕರ್ ಅವರಿಗೆ  ಕಾಂಬ್ಳಿ ಕುರಿತು ಪ್ರಶ್ನಿಸಿದಾಗ, " ನಾನು ಪ್ರತಿಭೆಯ ಬಗ್ಗೆ ಮಾತನಾಡಲು ಬಯಸುವುದಿಲ್ಲ, ಆ ಕುರಿತು ನಿರ್ಣಯಿಸಲು ನನ್ನಿಂದ ಸಾಧ್ಯವಾಗದ ಮಾತು ಎಂದು ಹೇಳಿದ್ದಾರೆ. 
 
ತಮ್ಮ ಮುಂಬೈ ಮೇಟ್ ಬಗೆಗಿನ ಮಾತುಗಳನ್ನು ಮುಂದುವರೆಸಿದ ಸಚಿನ್,"ನಮ್ಮಲ್ಲಿನ ವ್ಯತ್ಯಾಸಗಳ ಬಗ್ಗೆ ಹೇಳಬೇಕೆಂದರೆ, ನಾವಿಬ್ಬರು ಬೇರೆ ಬೇರೆ ವ್ಯಕ್ತಿಗಳು. ಹಾಗೆಯೇ ನಮ್ಮ ಜೀವನ ಶೈಲಿ, ನಡತೆ ಕೂಡ ವಿಭಿನ್ನವಾದುದು. ಅನೇಕ ಸಂದರ್ಭಗಳಲ್ಲಿ ನಾವು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದೇವೆ. ನನ್ನ ಬಗ್ಗೆ ಹೇಳುವುದಾದರೆ, ನನ್ನ ಕುಟುಂಬ ಸದಾ ನನ್ನ ಮೇಲೆ ನಿಗಾ ಇಟ್ಟಿತ್ತು. ನಾನು ವಿನೋದ್ ಬಗ್ಗೆ ಈ ಕುರಿತು ಮಾತನಾಡಲಾಗುವುದಿಲ್ಲ ಎಂದಿದ್ದಾರೆ.
 
ಸ್ನೇಹಿತರಿಬ್ಬರು ಶಾಲಾ ಅವಧಿಯಲ್ಲಿ ಜೊತೆಯಾಟದ ಮೂಲಕ ವಿಶ್ವದಾಖಲೆಯ  664 ರನ್ ಗಳನ್ನು ಕಲೆ ಹಾಕಿದ್ದರು. ಟೆಸ್ಟ್ ಬದುಕಿನಲ್ಲಿ 184 ರನ್ ಗಳೊಂದಿಗೆ 54. 20 ಸರಾಸರಿಯನ್ನು ಹೊಂದಿರುವ ಕಾಂಬ್ಳಿ, 104 ಏಕದಿನ ಪಂದ್ಯಗಳನ್ನಾಡಿ 32.59 ಸರಾಸರಿಯಲ್ಲಿ 2477 ರನ್ ಗಳಿಸಿದ್ದಾರೆ.
 
ಕಾಂಬ್ಳಿ ಏಕದಿನ ತಂಡಕ್ಕೆ 9 ಬಾರಿ ಮರು ಆಯ್ಕೆಯಾಗಲು ಸಫಲರಾಗಿದ್ದರು. ಕೊನೆಯದಾಗಿ ಅವರು 2000ರಲ್ಲಿ ಭಾರತ ತಂಡದ ಭಾಗವಾಗಿದ್ದರು. 1995 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದಾಗ ಅವರ ವಯಸ್ಸು ಕೇವಲ 23 ಆಗಿತ್ತು. 

ವೆಬ್ದುನಿಯಾವನ್ನು ಓದಿ