ಶ್ರೀನಿವಾಸನ್ ವಿರುದ್ಧ ಸಲಿಂಗಕಾಮಿ ಮಗ ಮಾಡಿದ ಆರೋಪವೇನು?

ಸೋಮವಾರ, 4 ಮೇ 2015 (18:29 IST)
ವಂಶವನ್ನು ಮುಂದುವರೆಸಲು ಮತ್ತು ಆಸ್ತಿಯಲ್ಲಿ ಪಾಲು ಬೇಕೆಂದರೆ ನೀನು ಯುವತಿಯೋರ್ವಳನ್ನು ಮದುವೆಯಾಗಲೇ ಬೇಕು ಎಂದು ನನ್ನ ತಂದೆ ಒತ್ತಾಯಿಸಿದ್ದರು ಎಂದು  ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ವಿರುದ್ಧ ಅವರ  ಸಲಿಂಗ ಕಾಮಿ ಪುತ್ರ ಅಶ್ವಿನ್ ಆರೋಪಿಸಿದ್ದಾರೆ.

"ನನ್ನ ಸಲಿಂಗ ಪ್ರೇಮಿಯ ಜತೆ ಜೀವನ ನಡೆಸುತ್ತಿರುವ ನನಗೆ ಹೆಣ್ಣನ್ನು ಮದುವೆಯಾಗಲು ಒಪ್ಪಿದರೆ ಮಾತ್ರ ಆಸ್ತಿ ನೀಡುವುದಾಗಿ ತಂದೆ ಒತ್ತಡ ಹೇರಿದ್ದರು. ಜತೆಗೆ ಸಲಿಂಗಿ ಸ್ನೇಹಿತನ ಜತೆ ಸಂಬಂಧವನ್ನು ಕಡಿದುಕೊಳ್ಳುವಂತೆ ಬಲವಂತ ಮಾಡಿದ್ದರು", ಎಂದು ಇಂಗ್ಲೀಷ್ ಪತ್ರಿಕೆ ಒಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅಶ್ವಿನ್ ಶ್ರೀನಿವಾಸನ್ ತಂದೆಯ ವಿರುದ್ಧ ಆಪಾದನೆ ಹೊರಿಸಿದ್ದಾರೆ. 
 
ಅಶ್ವಿನ್ ತನ್ನ ಸಲಿಂಗಿ ಸ್ನೇಹಿತ ಅವಿ ಮುಖರ್ಜಿ ಜತೆಯಲ್ಲಿ ಚೈನ್ನೈನಲ್ಲಿರುವ ತಂದೆಯ ನಿವಾಸದಲ್ಲಿಯೇ ವಾಸಿಸುತ್ತಿದ್ದಾನೆ. ತನ್ನ ತಂದೆ 2007ರಿಂದ 2008ರ ಅಧಿಯಲ್ಲಿ ತನಗೆ ಬರೆದಿರುವ ಹಲವಾರು ಪತ್ರಗಳನ್ನು ಆತ ಮಾಧ್ಯಮದೆದುರು ಬಹಿರಂಗ ಪಡಿಸಿದ್ದಾನೆ. 
 
ಜೂನ್ 20, 2007ರಲ್ಲಿ ಬರೆದ ಒಂದು ಪತ್ರದಲ್ಲಿ ಹೀಗಿದೆ, "ಆಶ್, ನೀನು ನನಗೆ ಇರುವ ಒಬ್ಬನೇ ಮಗ. ನಾನು ಮತ್ತು ನಿನ್ನ ತಾಯಿ ನಿನ್ನನ್ನು ತುಂಬಾ ಪ್ರೀತಿಸುತ್ತೇವೆ. ನಾನು ನಿಮ್ಮ ಬಗ್ಗೆ ಇಟ್ಟುಕೊಂಡಿರುವ ಕನಸುಗಳೇನೆಂಬುದು ನಿನಗೆ ಗೊತ್ತಿರಬೇಕು. ನೀನು ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿದು ಹಲವು ವರ್ಷಗಳೇ ಕಳೆದಿವೆ. ಪರಿಸ್ಥಿತಿ ಸಂಪೂರ್ಣ ಹದಗೆಡುವ ಮೊದಲು ನೀನು ನಿನ್ನ ಒಳ್ಳೆಯದಕ್ಕಾಗಿ ಕೆಲವೊಂದು ನಿರ್ಧಾರಕ್ಕೆ ಬರಲೇ ಬೇಕು. ನಾನು ಹಣವನ್ನು ಗಳಿಸಿದ್ದು ಸ್ವಂತ ಪರಿಶ್ರಮದಿಂದ. ಇದು ನನ್ನ ರಕ್ತದವರ ಪಾಲಾಗಬೇಕು. ನನ್ನ ವಂಶ ಮುಂದುವರೆಯಬೇಕು ಎಂದು ನಾನು ಬಯಸುತ್ತೇನೆ. ನನ್ನ ಉದ್ಯಮವನ್ನು ಮುಂದುವರೆಸಲು ನಾನು ವಂಶೋದ್ಧಾರಕನನ್ನು ಬಯಸುತ್ತೇನೆ. ಹೀಗಾಗಿ ನೀನು ಒಂದು ಹುಡುಗಿಯನ್ನು ಮದುವೆಯಾಗುವುದು ಒಳ್ಳೆಯದು".
 
ಸಪ್ಟೆಂಬರ್ 27, 2007ರಂದು ಬರೆದ ಇನ್ನೊಂದು ಪತ್ರ ಹೀಗೆ ಹೇಳುತ್ತದೆ, "ನೀನು ಹಲವಾರು ವರ್ಷಗಳಿಂದ ತ್ಯಜಿಸಿರುವ ಸಮಾಜಮುಖಿ ಜೀವನಕ್ಕೆ ಮರಳಲೇ ಬೇಕು. ನಾನು ರೂಪಾ (ಮಗಳು)ಳನ್ನು ಇಂಡಿಯಾ ಸಿಮೆಂಟ್ ಬೋರ್ಡ್‌ನಲ್ಲಿ ಸೇರ್ಪಡೆ ಮಾಡುತ್ತೇನೆ. ನೀನು ನಿನ್ನಲ್ಲಿ ಬದಲಾವಣೆ ತಂದುಕೊಂಡರೆ ಈ ಬೋರ್ಡ್‌ನಲ್ಲಿ ಸೇರಬಹುದು. ನಿನಗೆ ಸಮಾಜವನ್ನು ಎದುರಿಸುವ ಶಕ್ತಿ ಇಲ್ಲ. ನಿನ್ನಲ್ಲಿ ನೀನು ಬದಲಾವಣೆ ಮಾಡಿಕೊಂಡರೆ ನಾನು ನಿನ್ನನ್ನು ಮೆಚ್ಚುತ್ತೇನೆ",
 
ಇದು ತಮ್ಮ ಖಾಸಗಿ ಜೀವನದ ವಿಚಾರವೆಂದಿರುವ ಶ್ರೀನಿವಾಸನ್ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ