ಇಂತಹಾ ಸರಳತೆ ಮೆರೆಯುತ್ತಿರುವ ವಿಶ್ವದ ಏಕೈಕ ಕ್ರಿಕೆಟಿಗ ರಾಹುಲ್ ದ್ರಾವಿಡ್
ಮಂಗಳವಾರ, 30 ಜನವರಿ 2018 (11:11 IST)
ಬೆಂಗಳೂರು: ಆಧುನಿಕ ಕ್ರಿಕೆಟ್ ಜಗತ್ತು ಹೇಗಿದೆಯೆಂದರೆ ಒಂದು ಶತಕ ಹೊಡೆದರೆ, ಇಲ್ಲಾ ಒಮ್ಮೆ ಐದು ವಿಕೆಟ್ ಕಿತ್ತರೆ ಹೀರೋಗಳಾಗಿ ಬಿಡುತ್ತಾರೆ. ಆ ನಂತರ ಆ ಕ್ರಿಕೆಟಿಗನನ್ನು ಹಿಡಿಯುವವರೇ ಇಲ್ಲ. ಆದರೆ ರಾಹುಲ್ ದ್ರಾವಿಡ್ ಎಂಬ ಮಹಾನ್ ಕ್ರಿಕೆಟಿಗ ಹಾಗಲ್ಲ.
ಅವರೊಂಥರಾ ತುಂಬಿದ ಕೊಡ. ಎಂದಿಗೂ ತಮ್ಮ ಸಾಧನೆಗೆ ಗರ್ವ ಪಟ್ಟುಕೊಂಡವರಲ್ಲ. ತಮಗೆ ಸಿಕ್ಕಿದ ಸ್ಥಾನದಿಂದ ಮೈ ಮರೆತವರಲ್ಲ. ಅಂದಿಗೂ ಹಾಗೆ.. ಇಂದಿಗೂ ಹಾಗೆಯೇ. ಹಿರಿಯ ಕ್ರಿಕೆಟಿಗರ ತಂಡಕ್ಕೆ ಕೋಚ್ ಆಗುವ ಅವಕಾಶ ತಾನಾಗಿಯೇ ಕಾಲಿಗೆಡರಿ ಬಂದರೂ ಹಿರಿಯ ಕ್ರಿಕೆಟಿಗರ ಪ್ರತಿಷ್ಠೆಯ ಪ್ರಪಂಚ ಬೇಡವೆಂದು ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಕ್ರಿಕೆಟಿಗರಿಗೆ ಗುರುವಾಗಿರುವುದರಲ್ಲೇ ಖುಷಿ ಕಾಣುತ್ತಿದ್ದಾರೆ.
ಬಹುಶಃ ದ್ರಾವಿಡ್ ತಾವು ಟೀಂ ಇಂಡಿಯಾದಲ್ಲಿದ್ದಾಗಲೂ ಇಷ್ಟೊಂದು ಎಂಜಾಯ್ ಮಾಡುತ್ತಿರಲಿಲ್ಲವೇನೋ. ಆ ಪರಿ ಹುಡುಗರೊಂದಿಗೆ ಹುಡುಗನಾಗಿದ್ದಾರೆ ಈ ಮಹಾನ್ ಕ್ರಿಕೆಟಿಗ. ಯುವ ಭಾರತ ತಂಡ ವಿಶ್ವಕಪ್ ಫೈನಲ್ ಗೇರಿದ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕುತೂಹಲಕಾರಿ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ.
150 ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯ ಆಡಿದ ಮೇಲೂ ಜ್ಯೂನಿಯರ್ ತಂಡದ ಕೋಚ್ ಆಗಿ ಕೆಲಸ ಮಾಡುತ್ತಿರುವ ವಿಶ್ವದ ಏಕೈಕ ಕ್ರಿಕೆಟಿಗ ದ್ರಾವಿಡ್ ಎಂದು ಸೆಹ್ವಾಗ್ ಹೇಳಿದ್ದಾರೆ. ಯಾವ ಹಮ್ಮು ಇಲ್ಲದೇ, ಹೆಸರಿನ ಅಪೇಕ್ಷೆಯೂ ಇಲ್ಲದೇ ಕ್ರಿಕೆಟಿಗರನ್ನು ಬೆಳೆಸುವ ಉದ್ದೇಶದಿಂದಲೇ ದುಡಿಯುತ್ತಿರುವ ಕ್ರಿಕೆಟಿಗ ರಾಹುಲ್ ದ್ರಾವಿಡ್ ಗೆ ನಮ್ಮದೊಂದು ಸಲಾಂ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ