ಬೆಂಗಳೂರು: ಟೀಂ ಇಂಡಿಯಾ ಸದ್ಯಕ್ಕೆ ಯಶಸ್ಸಿನ ಉತ್ತುಂಗದಲ್ಲಿದೆ. ಟೆಸ್ಟ್ ಕ್ರಿಕೆಟ್ ನಲ್ಲಂತೂ ದಾಖಲೆಯ ಮೇಲೆ ದಾಖಲೆ ಮಾಡುತ್ತಿದೆ. ನಂ.1 ಪಟ್ಟವೂ ನಮ್ಮದಾಗಿದೆ.
ಹಿಂದೆಲ್ಲಾ ಟೆಸ್ಟ್ ಕ್ರಿಕೆಟ್ ಎಂದರೆ, ಅನುಭವಿಗಳ ಆಟ ಎನ್ನಲಾಗುತ್ತಿತ್ತು. ಇಂದು ಟೀಂ ಇಂಡಿಯಾದಲ್ಲಿ ಅನುಭವಿಗಳಿಲ್ಲ. ಯವಕರ ಪಡೆಯೇ ಇದೆ. ಆದರೂ ಭಾರತ ಯಶಸ್ಸು ಕಾಣುತ್ತಿದೆ. ಇದೆಲ್ಲದರ ಹಿಂದಿರುವ ಶಕ್ತಿ ಎಂದರೆ ರಾಹುಲ್ ದ್ರಾವಿಡ್ ವಾಲ್ ಆಫ್ ಇಂಡಿಯನ್ ಕ್ರಿಕೆಟ್.
ಅವರು ಟೀಂ ಇಂಡಿಯಾದಲ್ಲಿದ್ದಾಗಲೂ ವಾಲ್ ನಂತೇ ಆಡಿದರು. ಈಗಲೂ ಭವಿಷ್ಯದ ಗೋಡೆಗಳಿಗೆ ಅಡಿಪಾಯ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಭಾರತ ಅಂಡರ್ 19 ತಂಡ ಶ್ರೀಲಂಕಾ ಸೋಲಿಸಿ ಏಷ್ಯಾ ಕಪ್ ಮುಡಿಗೇರಿಸಿದ್ದಕ್ಕೆ ಈ ಮಾತು ಹೇಳುತ್ತಿಲ್ಲ. ದ್ರಾವಿಡ್ ಟೀಂ ಇಂಡಿಯಾ ಕಟ್ಟುವ ಕೆಲಸದಲ್ಲಿದ್ದಾರೆ ಎನ್ನಲು ಹಲವು ನಿದರ್ಶನಗಳಿವೆ.
ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಆಗಿರುವಾಗ ದ್ರಾವಿಡ್ ಹೇಗೆ ಭವಿಷ್ಯದ ತಂಡ ಕಟ್ಟುವ ಕೆಲಸ ಮಾಡಿಯಾರು ಎಂಬ ಅಚ್ಚರಿ ನಿಮಗಾಗಬಹುದು. ಆದರೆ ಇದು ಅಕ್ಷರಶಃ ಸತ್ಯ. ಕಳೆದ ವರ್ಷ ಮುಂಬೈನಲ್ಲಿ ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ಏಕದಿನ ನಾಯಕ ಎಂಎಸ್ ಧೋನಿ, ರಾಹುಲ್ ದ್ರಾವಿಡ್ ಸಭೆ ಸೇರಿದ್ದರು. ಆಗ ಭವಿಷ್ಯದ ತಂಡ ಕಟ್ಟುವ ಬಗ್ಗೆ ಪರಸ್ಪರ ಚರ್ಚೆ ನಡೆದಿತ್ತು. ಅದನ್ನೀಗ ದ್ರಾವಿಡ್ ಅಕ್ಷರಶಃ ಪಾಲಿಸುತ್ತಿದ್ದಾರೆ.
ನೀವೇ ನೋಡಿ. ಪ್ರಸಕ್ತ ಟೀಂ ಇಂಡಿಯಾದಲ್ಲಿರುವ ಅರ್ಧಕ್ಕರ್ಧ ಆಟಗಾರರು ತಮ್ಮ ಯಶಸ್ಸಿಗೆ ಮೂಲ ಕಾರಣ ದ್ರಾವಿಡ್ ಎನ್ನುತ್ತಾರೆ. ಕಾರಣ ಈ ಆಟಗಾರರ ಭವಿಷ್ಯ ನಿರೂಪಿಸುವಲ್ಲಿ ದ್ರಾವಿಡ್ ಪಾತ್ರ ದೊಡ್ಡದು. ಪ್ರಸಕ್ತ ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ಕೆಎಲ್ ರಾಹುಲ್, ಕರುಣ್ ನಾಯರ್ ಇಷ್ಟೂ ಆಟಗಾರರು ತಮ್ಮ ಯಶಸ್ಸಿಗೆ ದ್ರಾವಿಡ್ ಸ್ಪೂರ್ತಿ ಎಂದಿದ್ದಾರೆ.
ಅದರಲ್ಲೂ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಏಕದಿನ ಪಂದ್ಯಗಳಲ್ಲಿ ಮಿಂಚಿದ ಮೇಲೆ ಭಾರತ ಎ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ದ್ರಾವಿಡ್ ತಮಗೆ ನೀಡಿದ ಸಲಹೆಗಳೇ ತನ್ನನ್ನು ಇಲ್ಲಿಯ ತನಕ ತಂದಿದೆ ಎಂದಿದ್ದರು. ರಾಜ್ಯದ ಕರುಣ್ ನಾಯರ್, ರಾಹುಲ್ ಎಲ್ಲರಿಗೂ ದ್ರಾವಿಡ್ ಪ್ರಭಾವವಿದೆ. ಇನ್ನು, ಚೇತೇಶ್ವರ ಪೂಜಾರ ಇವರಿಗಿಂತ ಹಿರಿಯರೆನಿಸಿದರೂ, ಅವರನ್ನು ಜ್ಯೂನಿಯರ್ ದ್ರಾವಿಡ್ ಎನ್ನುವಷ್ಟು ಪ್ರಭಾವ ಅವರ ಆಟದಲ್ಲಿದೆ. ಅಜಿಂಕ್ಯಾ ರೆಹಾನೆ ರಾಜಸ್ಥಾನ್ ರಾಯಲ್ಸ್ ತಂಡದ ಸದಸ್ಯರಾಗಿದ್ದಾಗ ದ್ರಾವಿಡ್ ಕೈಕೆಳಗೆ ಪಳಗಿದವರು.
ಒಬ್ಬ ಆಟಗಾರನಾಗಿ ದ್ರಾವಿಡ್ ತಮ್ಮ ಪಾತ್ರವನ್ನು ಎಷ್ಟು ಚೆನ್ನಾಗಿ ನಿಭಾಯಿಸಿದರೋ, ಅಷ್ಟೇ ಗಂಭೀರತೆಯಿಂದ ಭವಿಷ್ಯದ ಟೀಂ ಇಂಡಿಯಾ ಎಂದೇ ಪರಿಗಣಿತವಾಗಿರುವ ಭಾರತ ಎ ತಂಡದ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಯುವಕರ ಹಾಗೆ ದ್ರಾವಿಡ್ ತಾವು ಕ್ರಿಕೆಟ್ ಆಡುತ್ತಿದ್ದಾಗಲೂ, ತಮಾಷೆ ಮಾಡುತ್ತಿದ್ದ ವ್ಯಕ್ತಿಯಲ್ಲ ಎಂದು ಅವರ ಸಹವರ್ತಿಗಳೇ ಹೇಳುತ್ತಿದ್ದರು.
ಆದರೆ ಈಗ ದ್ರಾವಿಡ್ ಗುರುವಾಗಿ ತಮ್ಮ ಯುವ ಆಟಗಾರರನ್ನು ಆಟದ ಕಡೆಗೆ ಎಷ್ಟು ಸೀರಿಯಸ್ ಆಗಿ ತೊಡಗಿಸಿಕೊಳ್ಳಬಹುದೋ ಅಷ್ಟನ್ನು ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗ ಯುವಕರ ಜತೆ ಹೊಸಬನಂತೆ ಎಂಜಾಯ್ ಮಾಡುವುದನ್ನೂ ಕಲಿತಿದ್ದಾರೆ.
ಹಿಂದೊಮ್ಮೆ ಬಿಸಿಸಿಐ ನೇರವಾಗಿ ಡಂಕನ್ ಫ್ಲೆಚರ್ ನಂತರ ಟೀಂ ಇಂಡಿಯಾ ಕೋಚ್ ಆಗುವ ಆಫರ್ ನೀಡಿದಾಗ ದ್ರಾವಿಡ್ ಒಪ್ಪಲಿಲ್ಲ. ಎ ತಂಡದ ಕೋಚ್ ಆಗಿರಲು ಬಯಸಿದರು. ಅವರ ಈ ನಿರ್ಧಾರ ಈಗ ಭಾರತೀಯ ಕ್ರಿಕೆಟಿಗರಿಗೆಲ್ಲರೂ ಸರಿಯೆನಿಸಬಹುದು. ಅವರು ಅಡಿಪಾಯ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಅವರು ಸುಂದರ, ಪ್ರತಿಭಾವಂತರ ತಂಡ ಕಟ್ಟಿ ಟೀಂ ಇಂಡಿಯಾಕ್ಕೆ ಕಳುಹಿಸುತ್ತಿರುವುದರಿಂದಲೇ ಭಾರತ ಇಂದು ವಿಶ್ವ ಕ್ರಿಕೆಟ್ ನಲ್ಲಿ ಇಷ್ಟೊಂದು ಯಶಸ್ಸು ಕಾಣುತ್ತಿರುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ