ಲಂಡನ್: ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕರುಣ್ ನಾಯರ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಕಳಪೆ ಫಾರ್ಮ್ ನಿಂದಾಗಿ ಮೊನ್ನೆಯವರೆಗೂ ಅವಮಾನ ಅನುಭವಿಸಿದ್ದ ಕರುಣ್ ಗೆ ಈಗ ಅವಮಾನದ ನಂತರ ಸನ್ಮಾನ ಸಿಕ್ಕಿದೆ.
ಮೊದಲ ಮೂರು ಪಂದ್ಯಗಳಲ್ಲಿ ಆಡಿದ್ದ ಕರುಣ್ ನಾಯರ್ ಅರ್ಧಶತಕ ಕೂಡಾ ಸಿಡಿಸಲು ವಿಫಲರಾಗಿದ್ದರು. 8 ವರ್ಷಗಳ ನಂತರ ತಂಡದಲ್ಲಿ ಅವಕಾಶ ಪಡೆದಿದ್ದ ಕರುಣ್ ನಾಯರ್ ಕಳೆದ ಪಂದ್ಯದಲ್ಲಿ ಕಳಪೆ ಆಟದಿಂದ ಹೊರಗುಳಿದರು. ಹೀಗಾಗಿ ಮೂರನೇ ಪಂದ್ಯವೇ ಕರುಣ್ ಗೆ ಕೊನೆಯ ಪಂದ್ಯವಾಗಿತ್ತು ಎಂದೇ ಎಲ್ಲರೂ ಅಂದುಕೊಂಡಿದ್ದರು.
ಕಳೆದ ಪಂದ್ಯದಲ್ಲಿ ಅವಕಾಶ ಸಿಗದೇ ಇದ್ದಾಗ ಕರುಣ್ ಪೆವಿಲಿಯನ್ ನಲ್ಲಿ ಕೂತು ಏಕಾಂಗಿಯಾಗಿ ಕಣ್ಣೀರು ಹಾಕಿದ್ದರು. ಆಗ ಗೆಳೆಯ ಕೆಎಲ್ ರಾಹುಲ್ ಅವರನ್ನು ಸಮಾಧಾನಿಸಿದ್ದರು. ಅದೃಷ್ಟವೆಂಬಂತೆ ಈ ಪಂದ್ಯದಲ್ಲಿ ಕರುಣ್ ಗೆ ಅವಕಾಶ ಸಿಕ್ಕಿದೆ.
ಈ ಅವಕಾಶವನ್ನು ಅವರು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಮೊದಲ ದಿನ ಟೀಂ ಇಂಡಿಯಾ 6 ವಿಕೆಟ್ ಉದುರಿಸಿಕೊಂಡಿದ್ದು ಕೇವಲ 204 ರನ್ ಗಳಿಸಿದೆ. ಎಲ್ಲಾ ಬ್ಯಾಟಿಗರೂ ವಿಫಲರಾಗಿ ಪೆವಿಲಿಯನ್ ಸೇರಿಕೊಂಡಿರುವಾಗ ಕರುಣ್ ಮಾತ್ರ 52 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರಿಗೆ 19 ರನ್ ಗಳಿಸಿರುವ ವಾಷಿಂಗ್ಟನ್ ಸುಂದರ್ ಸಾಥ್ ನೀಡುತ್ತಿದ್ದಾರೆ. ಕರುಣ್ ಅರ್ಧಶತಕ ಸಿಡಿಸಿದಾಗ ಪೆವಿಲಿಯನ್ ನಲ್ಲಿದ್ದ ಆಟಗಾರರು ಗೌರವ ಸಲ್ಲಿಸಿದ್ದಾರೆ. ದಿನದಾಟ ಮುಗಿಸಿ ತೆರಳುವಾಗ ಎದುರಾಳಿ ಆಟಗಾರ ಜೋ ರೂಟ್ ಹತ್ತಿರ ಬಂದು ಬೆನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲು ಅವಮಾನ ಮತ್ತೆ ಸನ್ಮಾನ ಎನ್ನುವುದು ಇದಕ್ಕೇ ಅಲ್ಲವೇ?