ಬ್ಯಾಟ್ ನಿಂದ ಒಂದು ಗ್ರಾಂ ಕಡಿಮೆಯಾದರೂ ರಾಹುಲ್ ದ್ರಾವಿಡ್ ಗೆ ಗೊತ್ತಾಗುತ್ತಿಂತೆ!

ಗುರುವಾರ, 2 ಫೆಬ್ರವರಿ 2017 (11:29 IST)
ಬೆಂಗಳೂರು: ರಾಹುಲ್ ದ್ರಾವಿಡ್ ಎಂದರೆ ಹಾಗೇ. ಅವರು ಏಕಾಗ್ರತೆಗೆ ಇನ್ನೊಂದು ಹೆಸರು. ಅವರ ಏಕಾಗ್ರತೆ ಎಷ್ಟಿತ್ತೆಂದರೆ ಅವರು ನಿತ್ಯವೂ ಬಳಸುವ ಬ್ಯಾಟ್ ನಿಂದ ಒಂದು ಗ್ರಾಂ ಕಡಿಮೆಯಾದರೂ ಅವರಿಗೆ ಗೊತ್ತಾಗುತ್ತಿಂತೆ!

 
ಹಾಗಂತ ಹೇಳಿದ್ದು ಬೇರೆ ಯಾರೂ ಅಲ್ಲ. ಅವರ ಪತ್ನಿ ವಿಜೇತಾ ಪೆಂಡಾರ್ಕರ್. ತಮ್ಮ ಆಟದ ಮೇಲೆ ಅಷ್ಟೊಂದು ಆಸಕ್ತಿ, ಏಕಾಗ್ರತೆ ದ್ರಾವಿಡ್ ಗಿತ್ತು. ಅಂತಹಾ ತಪಸ್ವಿ ಆಟಗಾರ ಇಂದು ಭಾರತದ ಯುವ ತಂಡದ ಗುರು. ಟೀಂ ಇಂಡಿಯಾ ಭವಿಷ್ಯ ಕಟ್ಟುವ ಕೆಲಸದಲ್ಲಿದ್ದಾರೆ.

ಹಾಗಿರುವ ದ್ರಾವಿಡ್ ಗೆ ತಮ್ಮ ಶಿಷ್ಯಂದಿರು ಯಶಸ್ಸು ಕಾಣುವುದಕ್ಕಿಂತ ಸೋಲುವುದನ್ನು ನೋಡಲು ಇಷ್ಟವಂತೆ! ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂಡರ್ 19 ತಂಡದ ಪಂದ್ಯದ ಪೂರ್ವಭಾವಿಯಾಗಿ ಮಾತನಾಡಿದ ದ್ರಾವಿಡ್ ತನ್ನ ಹುಡುಗರಿಗೆ ಇದು ಸೋಲಲು ತಕ್ಕ ಕಾಲ ಎಂದಿದ್ದಾರೆ.

ಅರೇ ಇದೇನು ಇವರು ಹೀಗೆಲ್ಲಾ ಹೇಳುತ್ತಿದ್ದಾರೆ ಎಂದು ಕೊಳ್ಳಬೇಡಿ. “ಸೋಲೇ ಗೆಲುವಿನ ಸೋಪಾನ ಎನ್ನುವುದನ್ನು ಯುವಕರು ಅರಿತುಕೊಳ್ಳಬೇಕು. ಸೋತಾಗಲೇ ಪಾಠ ಕಲಿಯುವುದು. ನಾನು ಯುವಕನಾಗಿದ್ದಾಗ ಫಲಿತಾಂಶದ ಬಗ್ಗೆ ಕಣ್ಣು ಹಾಯಿಸಬೇಡ. ಕಲಿಯುವುದರತ್ತ ಗಮನ ಹರಿಸು ಎಂದು ಸಲಹೆ ಸಿಗುತ್ತಿತ್ತು. ಅದೇ ಪಾಠ ಹುಡುಗರೂ ಕಲಿತುಕೊಳ್ಳಬೇಕು” ಎನ್ನುವುದು ದ್ರಾವಿಡ್ ಇಂಗಿತ.

ಹೇಳಿ ಕೇಳಿ ದ್ರಾವಿಡ್ ಗಂಭೀರ ಮನುಷ್ಯ. ತಾವು ನಾಯಕರಾಗಿದ್ದಾಗಲೇ ತಂಡದಲ್ಲಿ ಕೆಲವೊಂದು ಶಿಸ್ತು ಕ್ರಮಗಳನ್ನು ತಂದವರು. ಹಾಗಾದರೆ ಕೋಚ್ ಆಗಿ ಯುವ ಆಟಗಾರರು ಅವರ ಬಳಿ ಮಾತನಾಡಲು ಹೆದರುತ್ತಾರೆಯೇ ಎಂದು ದ್ರಾವಿಡ್ ರನ್ನು ಕೇಳಿದರೆ “ಹೆದರುವುದೇ? ಕಳೆದ ಬ್ಯಾಚ್ ನ ತಂಡ ನನ್ನನ್ನೇ ತಮಾಷೆ ಮಾಡುತ್ತಿತ್ತು” ಎಂದಿದ್ದಾರೆ. ಈಗ ಗೊತ್ತಾಯ್ತಲ್ಲಾ? ಭಾರತ ಎ ತಂಡದಿಂದ ಯಾಕೆ ಟೀಂ ಇಂಡಿಯಾಕ್ಕೆ ಅತ್ಯುತ್ತಮ ಆಟಗಾರರು ಬರುತ್ತಿದ್ದಾರೆಂದು?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ