ದೇಶದ ಪಾಲಿಗೆ ಹೀರೋ ಆದ ಅತ್ಯಾಚಾರದ ಆರೋಪಿ

ಮಂಗಳವಾರ, 10 ಮಾರ್ಚ್ 2015 (12:35 IST)
ಕಳೆದ ಸೋಮವಾರ ಇಂಗ್ಲೆಂಡ್ ವಿರುದ್ಧ ನಡೆದ ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶದ ಗೆಲುವಿನಲ್ಲಿ ಬೌಲರ್ ರುಬೆಲ್ ಹುಸೇನ್  ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಅತ್ಯಾಚಾರಿ ಎಂದು ಕೈ ತೋರಿಸುತ್ತಿದ್ದವರೆಲ್ಲ ಈಗ ಅವರನ್ನು ಹೀರೋ ಎಂದು ಕೊಂಡಾಡುತ್ತಿದ್ದಾರೆ. 
 
ರುಬೆಲ್ ಮದುವೆಯ ವಾಗ್ದಾನ ಮಾಡಿ ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಅವರ ಮಾಜಿ ಪ್ರೇಯಸಿ, ನಟಿ ನಜನೀನ ಅಕ್ತರ್ ಹೆಪ್ಪಿ  ಕಳೆದ ವರ್ಷ ಡಿಸೆಂಬರ್ 13 ರಂದು ಮೀರ್ಪುರ್ ಪೊಲೀಸ್ ಠಾಣೆಯಲ್ಲಿ  ಪ್ರಕರಣವನ್ನು ದಾಖಲಿಸಿದ್ದರು. ಆಕೆ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಂದು ರುಬೆಲ್ ಕೂಡ ಪ್ರತಿದೂರು ದಾಖಲಿಸಿದ್ದರು. 
 
ಈ ಆರೋಪದ ವಿಚಾರಣೆ ನಡೆಯುತ್ತಿದ್ದರಿಂದ ರುಬೆಲ್ ವಿಶ್ವಕಪ್‌ನಲ್ಲಿ ಆಡುವುದು ಅನುಮಾನವಾಗಿತ್ತು. ಆದರೆ ರುಬೆಲ್ ಪರ ವಾದ ಮಾಡಿದ್ದ ವಕೀಲರು ಅವರು ಬಾಂಗ್ಲಾ ಕ್ರಿಕೆಟ್ ತಂಡದ ಬಹುಪ್ರಮುಖ ಆಟಗಾರರಾಗಿರುವುದರಿಂದ ವಿಶ್ವಕಪ್ ಮುಗಿಯುವವರೆಗೆ ಜಾಮೀನು ನೀಡುವಂತೆ ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದರು. ಇದಕ್ಕೆ ಸಮ್ಮತಿಸಿದ್ದ ನ್ಯಾಯಾಧೀಶರು ರುಬೆಲ್ ಅವರಿಗೆ ಜಾಮೀನು ನೀಡಿದ್ದರು. 
 
ರುಬೆಲ್ ಹುಸೇನ್ ಬೌಲಿಂಗ್ ಮೋಡಿ ಎಲ್ಲ ಪಂದ್ಯಗಳಲ್ಲಿ ನೋಡುವಂತಿತ್ತು. ಆದರೆ ಮಹತ್ವಪೂರ್ಣ ಪಂದ್ಯದಲ್ಲಿ ತಮ್ಮ  ಕೈಚಳಕದಿಂದ ಬಲಿಷ್ಠ ಇಂಗ್ಲೆಂಡ್ ತಂಡದ ಬೆನ್ನು ಮುರಿದ ಹುಸೇನ್ ತಮ್ಮ ದೇಶ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಷ್ಟು ದಿನ ಅತ್ಯಾಚಾರಿ ಎಂದು ಮೂಗು ಮುರಿಯುತ್ತಿದ್ದವರ ನಾಲಿಗೆಯ ಮೇಲೆಲ್ಲ ಈಗ ರುಬೆಲ್‌ನದೇ ಹೆಸರು ಹರಿದಾಡುತ್ತಿದೆ. 

ವೆಬ್ದುನಿಯಾವನ್ನು ಓದಿ