ಹೆಡ್ ಕೋಚ್ ಹುದ್ದೆ ಸಿಗದ ರವಿಶಾಸ್ತ್ರಿಗೆ ನಿರಾಶೆ

ಶುಕ್ರವಾರ, 24 ಜೂನ್ 2016 (18:24 IST)
ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ ಹೆಡ್ ಕೋಚ್ ಹುದ್ದೆಗೆ  ಒಂದು ವರ್ಷದ ಮಟ್ಟಿಗೆ ನೇಮಕ ಮಾಡಿದ ಬಳಿಕ ರವಿ ಶಾಸ್ತ್ರಿ ಸ್ವಲ್ಪ ಮಟ್ಟಿಗೆ ನಿರಾಶರಾಗಿದ್ದಾರೆ. ಸದ್ಯಕ್ಕೆ ರಜಾಕಾಲದಲ್ಲಿರುವ ಶಾಸ್ತ್ರಿ ಬಿಸಿಸಿಐ ನಿರ್ಧಾರದಿಂದ ತಮಗೆ ನಿರಾಶೆಯಾಗಿದೆ ಎಂದು ತಿಳಿಸಿದರು. ಆದರೂ ಕುಂಬ್ಳೆಗೆ ಕೋಚ್ ಹುದ್ದೆಗೆ ನೇಮಕವಾಗಿದ್ದಕ್ಕೆ ಶುಭಾಶಯ ಹೇಳಿದರು. 
 
ತಾವು 18 ತಿಂಗಳಲ್ಲಿ ನೀಡಿದ ಫಲಿತಾಂಶದ ಹಿನ್ನೆಲೆಯಲ್ಲಿಯೂ ತಮ್ಮನ್ನು ಆಯ್ಕೆ ಮಾಡದಿರುವುದು ನಿರಾಶೆಯಾಗಿದೆ ಎಂದು ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುವುದಕ್ಕೆ ಹೆಸರಾಗಿರುವ ಶಾಸ್ತ್ರಿ ನುಡಿದರು. ಮಾಜಿ ಆಲ್ ರೌಂಡರ್ ತಮ್ಮ ಟಿವಿ ಕಾಮೆಂಟರಿ ಕೆಲಸವನ್ನು ಬದಿಗಿಟ್ಟು ಟೀಂ ಡೈರೆಕ್ಟರ್ ಹುದ್ದೆಗೆ ನೇಮಕವಾಗಿದ್ದರು.
 
ಶಾಸ್ತ್ರಿ ಡೈರೆಕ್ಟರ್ ಹುದ್ದೆಯಲ್ಲಿ ಭಾರತ ಉತ್ತಮವಾಗಿ ನಿರ್ವಹಿಸಿತು. ಭಾರತ ಎರಡು ವಿಶ್ವಕಪ್ ಸೆಮಿಗಳನ್ನು ಗೆದ್ದು ಶ್ರೀಲಂಕಾದಲ್ಲಿ 22 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಜಯಿಸಿತ್ತು. ಕುಂಬ್ಳೆ ಕೋಚ್ ಹುದ್ದೆಗೆ ತಡವಾಗಿ ಅಖಾಡಕ್ಕೆ ಧುಮುಕುವ ತನಕ ಶಾಸ್ತ್ರಿ ಫೇವರಿಟ್ ಆಗಿದ್ದರು.

ಕುಂಬ್ಳೆ ಅವರು 21 ಜನರ ಪಟ್ಟಿಯ ಅಂತಿಮ ಸಂದರ್ಶನದಲ್ಲಿ ಇರಲಿಲ್ಲ. ಆದರೆ ಸಲಹಾ ಸಮಿತಿಯು ಸೂಚಿಸಿದ ಮೇಲೆ ಕುಂಬ್ಳೆ ಹೆಸರನ್ನು ಸೇರಿಸಲಾಯಿತು. ಸೌರವ್ ಗಂಗೂಲಿ ಕುಂಬ್ಳೆಯನ್ನು ನೇಮಿಸುವ ಪ್ರಸ್ತಾಪ ಮಂಡಿಸಿದರು. ಅಂತಿಮವಾಗಿ ಸಚಿನ್ ಮತ್ತು ಲಕ್ಷ್ಮಣ್ ಬೆಂಬಲವನ್ನು ಗಂಗೂಲಿ ಗಳಿಸಿದರು.  ಸಲಹಾ ಸಮಿತಿಯ ಅಭಿಪ್ರಾಯವನ್ನು ಬಿಸಿಸಿಐ ಅಂತಿಮವಾಗಿ ಅನುಮೋದಿಸಿತು.

 ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ