ಕೈಗೆ ಬಂದ ತುತ್ತು ಬಾಯಿಗೆ ಬರದೇ ರಿಷಬ್ ಪಂತ್ ಗೆ ನಿರಾಸೆ

ಸೋಮವಾರ, 11 ಜನವರಿ 2021 (09:01 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಶತಕದ ಹೊಸ್ತಿಲಲ್ಲಿ ಔಟಾಗಿ ನಿರಾಸೆ ಅನುಭವಿಸಿದ್ದಾರೆ.


ಭಾರತ 407 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದು ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದೆ. ಭಾರತದ ಪರ ಇದೀಗ 76 ರನ್ ಗಳಿಸಿರುವ ಚೇತೇಶ್ವರ ಪೂಜಾರ ಮತ್ತು 3 ರನ್ ಗಳಿಸಿರುವ ಹನುಮ ವಿಹಾರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದು ರಿಷಬ್ ಪಂತ್. ಪೂಜಾರ ಜೊತೆಗೆ 148 ರನ್ ಗಳ ಜೊತೆಯಾಟವಾಡಿದ ರಿಷಬ್ 97 ರನ್ ಗಳಿಸಿ ನಥನ್ ಲಿಯೋನ್ ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡರು. ಆದರೆ ಅವರ ಈ ಬ್ಯಾಟಿಂಗ್ ನಿಂದಾಗಿ ಭಾರತಕ್ಕೆ ಗೆಲುವಿನ ಆಸೆ ಚಿಗುರಿತು. ಆದರೆ ಪಂತ್ ಔಟಾದ ಬಳಿಕ ಮತ್ತೆ ಭಾರತದ ಸ್ಥಿತಿ ತೂಗುಯ್ಯಾಲೆಯಲ್ಲಿದೆ.

ಸದ್ಯಕ್ಕೆ ಪೂಜಾರ-ಹನುಮ ವಿಹಾರಿ ಭಾರತಕ್ಕೆ ಭರವಸೆಯ ಬೆಳಕಾಗಿದ್ದಾರೆ. ಅತ್ತ ರವೀಂದ್ರ ಜಡೇಜಾ ಗಾಯಗೊಂಡಿದ್ದರೂ, ನೋವು ನಿವಾರಕ ಪಡೆದು ಬ್ಯಾಟಿಂಗ್ ಗೆ ಸಿದ್ಧರಾಗಿದ್ದಾರೆ. ಹಾಗಿದ್ದರೂ ಅವರ ಮೇಲೆ ಭಾರತಕ್ಕೆ ಹೆಚ್ಚು ಭಾರ ಹಾಕುವಂತಿಲ್ಲ. ಒಂದು ವೇಳೆ ಜಡೇಜಾ ಸಂಪೂರ್ಣ ಫಿಟ್ ಆಗಿದ್ದರೆ ಭಾರತಕ್ಕೆ ಗೆಲುವು ಸುಲಭವಾಗಿತ್ತು. ಟೀಂ ಇಂಡಿಯಾಗೆ ಗೆಲ್ಲಲು ಇನ್ನೂ 137 ರನ್ ಗಳ ಅಗತ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ