ದ್ರಾವಿಡ್ ವಿರುದ್ಧ ಚಾಪೆಲ್ ಕುತಂತ್ರ: ಬಾಂಬ್ ಸಿಡಿಸಿದ ಸಚಿನ್

ಮಂಗಳವಾರ, 4 ನವೆಂಬರ್ 2014 (09:38 IST)
ಕ್ರಿಕೆಟ್ ಜಗತ್ತಿನ ದೇವರು ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ಬಿಡುಗಡೆ ಮುನ್ನವೇ ಭಾರೀ ಕುತೂಹಲ ಕೆರಳಿಸುತ್ತಿದೆ.

2007ರ ವೆಸ್ಟ್ ಇಂಡಿಸ್ ಪ್ರವಾಸದ  ಸಂದರ್ಭದಲ್ಲಿ  ದ್ರಾವಿಡ್ ಅವರಿಂದ ನಾಯಕತ್ವ ಕಸಿದುಕೊಳ್ಳುವಂತೆ ಅಂದಿನ ಕೋಚ್ ಗ್ರೇಗ್ ಚಾಪೆಲ್ ಸಲಹೆ ನೀಡಿದ್ದರು ಎಂದು ಸಚಿನ್ ತಮ್ಮ ಆತ್ಮಕಥೆಯಲ್ಲಿ ಬಾಂಬ್ ಸಿಡಿಸಿದ್ದಾರೆ. 
 
"ಒಂದು ದಿನ ನಮ್ಮ ಮನೆಗೆ ಬಂದಿದ್ದ ಚಾಪೆಲ್ ನಾವಿಬ್ಬರು ಜತೆಯಾದರೆ ಭಾರತೀಯ ಕ್ರಿಕೆಟ್ ನ್ನು ಮುಂಬರುವ ಹಲವು ವರ್ಷಗಳವರೆಗೆ ನಿಯಂತ್ರಿಸಬಹುದು. ರಾಹುಲ್ ಅವರಿಂದ ನೀವು ನಾಯಕತ್ವ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದರು. ಚಾಪೆಲ್ ಮಾತುಗಳಿಂದ ನಾನು ಮತ್ತು ಪತ್ನಿ ಅಂಜಲಿ ಶಾಕ್‌ಗೆ ಒಳಗಾದೆವು. ನಾಯಕತ್ವ ಕುರಿತಂತೆ ಚಾಪೆಲ್ ನನ್ನ ಮನವೊಲಿಸಲು ಸಾಕಷ್ಟು  ಯತ್ನ ನಡೆಸಿದರಾದರೂ   ಯಾವುದೇ ಪ್ರಯೋಜನವಾಗದೇ ನಮ್ಮ ಮನೆಯಿಂದ ಹಿಂತಿರುಗಿದರು" ಎಂದು ಸಚಿನ್ ಹೇಳಿದ್ದಾರೆ. ತಮ್ಮ ಆತ್ಮ ಚರಿತ್ರೆಯಲ್ಲಿ ಚಾಪೆಲ್ ಅವರನ್ನು ಸಚಿನ್  'ರಿಂಗ್ ಮಾಸ್ಟರ್ ' ಎಂದು ಟೀಕಿಸಿದ್ದಾರೆ. 
 
ಸಚಿನ್ ಆತ್ಮಕಥೆ 'ಪ್ಲೇಯಿಂಗ್ ಇಟ್ ಮೈ ವೇ' ಇದೇ ತಿಂಗಳು 6 ರಂದು ಲೋಕಾರ್ಪಣೆಯಾಗುತ್ತಿದ್ದು ಹೆಸರಾಂತ ಕ್ರೀಡಾ ಪತ್ರಕರ್ತ, ಇತಿಹಾಸಕಾರ ಬೊರಿಯಾ ಮಜುಂದಾರ್  ಜತೆ ಸಚಿನ್ ಈ ಕೃತಿಯನ್ನು ರಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ