ವಿರಾಟ್ ಕೊಹ್ಲಿ ಕೊಟ್ಟ ಗಿಫ್ಟ್ ನೋಡಿ ಕಣ್ಣೀರು ಹಾಕಿದ್ದರಂತೆ ಸಚಿನ್ ತೆಂಡುಲ್ಕರ್
ಶುಕ್ರವಾರ, 18 ಫೆಬ್ರವರಿ 2022 (09:50 IST)
ಮುಂಬೈ: ಜಾಗತಿಕ ಕ್ರಿಕೆಟ್ ನಲ್ಲಿ ಸಚಿನ್ ಮತ್ತು ಕೊಹ್ಲಿ ನಡುವೆ ಎಷ್ಟೇ ಹೋಲಿಕೆಗಳು ನಡೆದರೂ ಈ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ಪರಸ್ಪರ ಗೌರವವಿದೆ. ಅದರಲ್ಲೂ ಕೊಹ್ಲಿ, ಸಚಿನ್ ರನ್ನು ತಮ್ಮ ಆರಾಧ್ಯ ದೈವವದಂತೆ ಪೂಜಿಸುತ್ತಾರೆ.
ಇಂತಿಪ್ಪ ಕೊಹ್ಲಿ, 2013 ರಲ್ಲಿ ಮುಂಬೈನಲ್ಲಿ ನಡೆದಿದ್ದ ಸಚಿನ್ ತೆಂಡುಲ್ಕರ್ ಅವರ ವಿದಾಯ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಗಿಫ್ಟ್ ಒಂದನ್ನು ನೀಡಿದ್ದರಂತೆ. ಅದನ್ನು ನೋಡಿ ಸಚಿನ್ ಕಣ್ಣೀರು ಹಾಕಿ ಅದನ್ನು ಅವರಿಗೇ ವಾಪಸ್ ಮಾಡಿದ್ದರಂತೆ. ಈ ಘಟನೆಯನ್ನು ಸಚಿನ್ ಸಂದರ್ಶನವೊಂದರಲ್ಲಿ ನೆನೆಸಿಕೊಂಡಿದ್ದಾರೆ.
ಕೊನೆಯ ಬಾಲ್ ಬಳಿಕ ಓಕೆ, ಇದೇ ನನ್ನ ಕೊನೆಯ ಆಟ. ಮುಂದೆಂದೂ ನಾನು ಭಾರತದ ಪರವಾಗಿ ಮೈದಾನಕ್ಕಿಳಿಯಲ್ಲ ಎಂದು ಯೋಚಿಸಿದಾಗ ತುಂಬಾ ದುಃಖವಾಯಿತು. ಅದೇ ಬೇಸರದಲ್ಲಿ ಡ್ರೆಸ್ಸಿಂಗ್ ರೂಂಗೆ ಬಂದು ಒಂದು ಮೂಲೆಯಲ್ಲಿ ಒಬ್ಬನೇ ಕೂತು ಟವೆಲ್ ನಿಂದ ಕಣ್ಣೀರು ಒರೆಸುತ್ತಿದ್ದೆ.
ಆಗ ಕೊಹ್ಲಿ ನನ್ನ ಬಳಿಗೆ ಬಂದಿದ್ದರು. ಅವರ ತಂದೆ ನೀಡಿದ್ದ ಪವಿತ್ರ ದಾರವೊಂದನ್ನು ನನಗೆ ನೀಡಿದರು. ನಾನು ಅದನ್ನು ಕೆಲವು ಕ್ಷಣ ನನ್ನ ಬಳಿ ಇಟ್ಟುಕೊಂಡು ಕೊಹ್ಲಿಗೇ ಮರಳಿಸಿದೆ. ಇದು ನಿನ್ನೆ ತಂದೆ ನೀಡಿದ ಅತ್ಯಂತ ಅಮೂಲ್ಯ ಉಡುಗೊರೆ. ಇದನ್ನು ನೀನು ಬೇರೆ ಯಾರಿಗೂ ನೀಡಬಾರದು. ನಿನ್ನ ಕೊನೆಯ ಉಸಿರುವವರೆಗೂ ಇದು ನಿನ್ನ ಬಳಿಯೇ ಇರಬೇಕು. ಅದು ನನಗೆ ಅತ್ಯಂತ ಭಾವುಕ ಕ್ಷಣವಾಗಿತ್ತು. ಅದನ್ನು ಯಾವತ್ತೂ ಮರೆಯಲಾರೆ ಎಂದು ಸಚಿನ್ ಹೇಳಿಕೊಂಡಿದ್ದಾರೆ.
ಇನ್ನೊಂದೆಡೆ ಕೊಹ್ಲಿ ಕೂಡಾ ಈ ಘಟನೆಯನ್ನು ಸ್ಮರಿಸಿಕೊಂಡಿದ್ದು, ನಾವು ಸಾಮಾನ್ಯವಾಗಿ ಪವಿತ್ರ ದಾರವನ್ನು ನಮ್ಮ ಮಣಿಕಟ್ಟಿಗೆ ಕಟ್ಟಿಕೊಳ್ಳುತ್ತೇವೆ. ನನ್ನ ತಂದೆ ಅವರು ಬಳಸುತ್ತಿದ್ದಂತಹ ಅಂತಹ ದಾರವನ್ನು ಕೊಟ್ಟಿದ್ದರು. ಅದನ್ನು ಯಾವತ್ತೂ ನನ್ನ ಬ್ಯಾಗ್ ನಲ್ಲಿಟ್ಟುಕೊಳ್ಳುತ್ತಿದ್ದೆ. ಅದು ನನ್ನ ಪಾಲಿಗೆ ಅತ್ಯಂತ ಅಮೂಲ್ಯ ವಸ್ತುವಾಗಿತ್ತು. ಅದನ್ನು ಯಾರಿಗೂ ಕೊಡಬಾರದು ಎಂದುಕೊಂಡಿದ್ದೆ. ಆದರೆ ಸಚಿನ್ ನನ್ನ ಪಾಲಿಗೆ ಸ್ಪೂರ್ತಿಯಾಗಿದ್ದರು, ಅವರ ಮೇಲೆ ನನಗೆ ಅಂತಹಾ ಪೂಜನೀಯ ಭಾವವಿತ್ತು. ಹೀಗಾಗಿ ಅದು ಅವರಿಗೆ ನನ್ನದೊಂದು ಸಣ್ಣ ಉಡುಗೊರೆಯಾಗಿತ್ತು ಎಂದು ಕೊಹ್ಲಿ ಹೇಳಿಕೊಂಡಿದ್ದರು.