ಕಿವೀಸ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಘೋಷಿಸಿದ ಬಳಿಕ ತಮ್ಮ ಅಂತಿಮ ಪತ್ರಿಕಾಗೋಷ್ಠಿಯನ್ನು ನಡೆಸಿದ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಅವರಿಗೆ ಕೆಲವು ಕ್ಲಿಷ್ಟಕರ ಪ್ರಶ್ನೆಗಳನ್ನು ಕೇಳಲಾಗಿತ್ತು. ನಾಲ್ಕು ವರ್ಷಗಳ ತಮ್ಮ ಕಾರ್ಯಾವಧಿಯನ್ನು ಪೂರ್ಣಗೊಳಿಸಿ ಹೊರ ನಡೆಯುತ್ತಿರುವ ಪಾಟೀಲ್ ಅವರಿಗೆ ಈ ಪ್ರಶ್ನೆಗಳು ಎದುರಾಗುವುದು ಮೊದಲೇ ನಿಶ್ಚಿತವಾಗಿದ್ದಂತಿತ್ತು. ಹೀಗಾಗಿಯೇ ಅವರು ಬಹಳ ಎಚ್ಚರಿಕೆಯಿಂದ ಈ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಬಿಸಿಸಿಐ ಮತ್ತು ಆಯ್ಕೆ ಸಮಿತಿ ನಡುವಿನ ಕೆಲ ವಿಷಯಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳಬೇಕು.ಅದನ್ನು ಹೊರ ಹಾಕುವಂತಿಲ್ಲ ಎಂದು ಅವರು ಕಳೆದ ವಾರ ಹೇಳಿದ್ದರು.
ಡಿಸೆಂಬರ್ 12, 2012ರಂದು ನಾವು ಸಚಿನ್ ಅವರನ್ನು ಭೇಟಿಯಾಗಿ ನಿಮ್ಮ ಭವಿಷ್ಯದ ಯೋಜನೆಗಳೇನು ಎಂದು ಕೇಳಿದೆವು. ಅವರು ನಿವೃತ್ತಿ ಬಗ್ಗೆ ಯೋಚಿಸಿಲ್ಲ ಎಂದರು. ಆದರೆ ಆಯ್ಕೆ ಸಮಿತಿ ಸಚಿನ್ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಂಡಿತ್ತು ಮತ್ತು ಈ ಕುರಿತು ಬಿಸಿಸಿಐಗೂ ಮಾಹಿತಿ ನೀಡಿತ್ತು. ಆಯ್ಕೆ ಸಮಿತಿಯೊಂದಿಗಿನ ತಮ್ಮ ಮುಂದಿನ ಭೇಟಿಯಲ್ಲಿ ತಮ್ಮನ್ನು ಕೈ ಬಿಡುವುದು ನಿಶ್ಚಿತ ಎಂಬ ಸುದ್ದಿ ಹೊರಬೀಳುವುದು ಸಚಿನ್ ಅವರಿಗೆ ಖಚಿತವಾಗಿತ್ತು. ನಮಗೆ ದೂರವಾಣಿ ಕರೆ ಮಾಡಿದ ಸಚಿನ್ ತಾವು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವುದಾಗಿ ತಮ್ಮ ನಿರ್ಧಾರ ಹೇಳಿದರು. ಆಗ ಅವರು ತಾವು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುತ್ತೇನೆ ಎಂದು ಘೋಷಿಸದಿದ್ದರೆ ಅವರನ್ನು ಖಚಿತವಾಗಿ ತಂಡದಿಂದ ಕೈ ಬಿಡಲಾಗುತ್ತಿತ್ತು ಎಂದು ಪಾಟೀಲ್ ಬಹುದೊಡ್ಡ ಗುಟ್ಟನ್ನು ರಟ್ಟುಗೊಳಿಸಿದ್ದಾರೆ.