ಶಾಹಿದ್ ಆಫ್ರಿದಿ ಮಗಳು ಸತ್ತಿಲ್ಲ

ಬುಧವಾರ, 27 ಏಪ್ರಿಲ್ 2016 (09:01 IST)
ಪಾಕಿಸ್ತಾನದ ಆಲ್‍ರೌಂಡರ್ ಕ್ರಿಕೆಟರ್ ಶಾಹಿದ್ ಅಫ್ರಿದಿಗೆ ಪುತ್ರಿ ವಿಯೋಗವಾಗಿದೆ ಎನ್ನುವ ಸುದ್ದಿ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡಿತ್ತು. ಅದು ವದಂತಿ ಎಂಬುದೀಗ ಸ್ಪಷ್ಟವಾಗಿದೆ. 

ಅಂತರ್ಜಾಲದಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ತಿಳಿದ ಆಫ್ರಿದಿ ಕುಟುಂಬ ನಿರಾಕರಿಸಿದ್ದು , ಅನಾರೋಗ್ಯದಿಂದ ಆಕೆ ಆಸ್ಪತ್ರೆಗೆ  ದಾಖಲಾಗಿದ್ದು ನಿಜ, ಆಕೆಗೆ ಯಾವುದೇ ತೊಂದರೆಯಾಗಿಲ್ಲ , ಇದೆಲ್ಲ ಯಾರೋ ಕಿಡಿಗೇಡಿಗಳು ಹಬ್ಬಿಸಿದ ಸುಳ್ಳು  ಸುದ್ದಿ ಎಂದು ಸ್ಪಷ್ಟನೆ ನೀಡಿದೆ.
 
ಆಫ್ರಿದಿ ಕಿರಿಯ ಪುತ್ರಿ ಅಮ್ಸಾರ ಕ್ಯಾನ್ಸರ್‍‌ನಿಂದ ಅಕಾಲಿಕ ಮರಣವನ್ನಪ್ಪಿದ್ದಾಳೆ ಎಂದು ಬರೆದು ಬಿಳಿ ಬಟ್ಟೆಯಲ್ಲಿ ಸುತ್ತಲ್ಪಟ್ಟ ಬಾಲಕಿಯೊಬ್ಬಳ ಮೃತದೇಹದ ಸುತ್ತ ಕೆಂಪು ಗುಲಾಬಿ ಹರಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಅದು ಆಫ್ರಿದಿ ಮಗಳಲ್ಲ ಎಂದು ತಿಳಿದು ಬಂದಿದೆ. 
 
ಆಫ್ರಿದಿ ಟಿ20 ನಾಯಕತ್ವವನ್ನು ತ್ಯಜಿಸಿದ್ದು, ಆ ಸಂದರ್ಭದಲ್ಲಿ ಅವರ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದ ಸುದ್ದಿ ಪ್ರಕಟವಾಗಿದ್ದು ಕೂಡ ಜನರು ಈ ಸುದ್ದಿಯನ್ನು ನಂಬಲು ಪ್ರೇರೇಪಿಸಿದೆ.
 
ಸದ್ಯ ನಡೆಯುತ್ತಿರುವ ಪಾಕಿಸ್ತಾನ್ ಕ್ರಿಕೆಟ್ ಕಪ್ 2016ರಿಂದ ಸಹ ಆಫ್ರಿದಿ ಹೊರಗಿದ್ದಾರೆ. ಹಜ್ ಯಾತ್ರೆಗೆ ತೆರಳಲು ನಿಶ್ಚಯಿಸಿರುವುದರಿಂದ ಅವರು ಟೂರ್ನಿಯಿಂದ ಹೊರಗಿದ್ದಾರೆ ಎಂದು ಹೇಳಲಾಗುತ್ತಿದೆ. 


ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ