ಶಾಕಿಂಗ್! ಆರು ತಿಂಗಳಿನಿಂದ ಟೀಂ ಇಂಡಿಯಾಗೆ ವೇತನವೇ ಸಿಕ್ಕಿಲ್ಲ!
ಶನಿವಾರ, 29 ಏಪ್ರಿಲ್ 2017 (07:42 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರೆಂದರೆ ಶ್ರೀಮಂತ ಕ್ರೀಡಾಪಟುಗಳೆಂಬುದು ಎಲ್ಲರ ನಂಬಿಕೆ. ಆದರೆ ಕಳೆದ ಆರು ತಿಂಗಳಿನಿಂದ ಕ್ರಿಕೆಟಿಗರಿಗೆ ವೇತನವೇ ಸಿಕ್ಕಿಲ್ಲವಂತೆ! ಹಾಗೆಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಹೌದು. ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐಯಲ್ಲಿ ಇಂತಹ ಅವ್ಯವಸ್ಥೆಯಾಗಿರುವುದಾಗಿ ಪತ್ರಿಕಾ ವರದಿ ತಿಳಿಸಿದೆ. ಟೀಂ ಇಂಡಿಯಾದ ಸ್ಥಿರ ಸದಸ್ಯರೊಬ್ಬರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರಂತೆ!
‘ಸಾಮಾನ್ಯವಾಗಿ ಹಿಂದೆಲ್ಲಾ ನಮಗೆ 15 ದಿನ ಅಥವಾ ಒಂದು ತಿಂಗಳು ವೇತನ ತಡವಾಗುತ್ತಿದ್ದುದು ಇತ್ತು. ಆದರೆ ಇದೇ ಮೊದಲ ಬಾರಿಗೆ ಇಷ್ಟು ಸುದೀರ್ಘ ದಿನಗಳು ಕಳೆದರೂ, ವೇತನ ಪಾವತಿಯಾಗಿಲ್ಲ. ಕಾರಣವೇನೆಂದು ತಿಳಿಯುತ್ತಿಲ್ಲ’ ಎಂದು ಆ ಆಟಗಾರ ಹೇಳಿಕೊಂಡಿದ್ದಾರೆಂದು ವರದಿಯಾಗಿದೆ.
ಭಾರತೀಯ ಕ್ರಿಕೆಟಿಗರಿಗೆ ಟೆಸ್ಟ್ ಪಂದ್ಯವೊಂದಕ್ಕೆ 15 ಲಕ್ಷ, ಏಕದಿನಕ್ಕೆ 6 ಲಕ್ಷ ರೂ. ಮತ್ತು ಟಿ-20 ಪಂದ್ಯಕ್ಕೆ 3 ಲಕ್ಷ ರೂ. ಸಂದಾಯವಾಗುತ್ತದೆ. ಆದರೆ ಇದನ್ನು ಬಿಸಿಸಿಐ ಬಾಕಿ ಉಳಿಸಿಕೊಂಡಿದೆಯಂತೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಬಿಸಿಸಿಐಯಲ್ಲಿ ನಡೆದ ಅಲ್ಲೋಲಕಲ್ಲೋದಿಂದಾಗಿ ಈ ಅವ್ಯವಸ್ಥೆ ಉಂಟಾಗಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಆದರೆ ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ