ರಾಂಚಿ: ಮಹೇಂದ್ರ ಸಿಂಗ್ ಧೋನಿ ಒಬ್ಬ ಯಶಸ್ವಿ ನಾಯಕ. ಅವರು ನಾಯಕತ್ವಕ್ಕೆ ವಿದಾಯ ಹೇಳುವುದೆಂದರೆ ಅದು ದೊಡ್ಡ ವಿಷಯವೇ. ಆದರೂ ಕ್ರಿಕೆಟ್ ವಲಯದಲ್ಲಿ ಕೆಲವು ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯಾವುದೇ ವಿಷಯವಾಗಿರಲಿ, ತಕ್ಷಣ ತಮ್ಮ ಟ್ವಿಟರ್ ಮೂಲಕ ಪ್ರತಿಕ್ರಯಿಸುವ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ವಿವಿಎಸ್ ಲಕ್ಷ್ಮಣ್ ಧೋನಿ ವಿದಾಯದ ಬಗ್ಗೆ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಇದಕ್ಕೆ ಬಹುಶಃ ಹಲವು ಕಾರಣಗಳೂ ಹುಡುಕಬಹುದು.
ಒಂದು ಕಾಲದಲ್ಲಿ ಟೀಂ ಇಂಡಿಯಾದ ಪ್ರಮುಖ ಸದಸ್ಯರಾಗಿದ್ದ ಇವರೆಲ್ಲಾ ಧೋನಿ ಮೇಲೆ ಒಂದಲ್ಲಾ ಒಂದು ಕಾರಣಕ್ಕೆ ಬೇಸರಿಸಿಕೊಂಡವರೇ. ಆದರೆ ಅದನ್ನು ನೇರವಾಗಿ ಅವರೆಂದೂ ಬಹಿರಂಗಪಡಿಸದಿದ್ದರೂ, ಧೋನಿ ವೃತ್ತಿ ಜೀವನದಲ್ಲಿ ವಿವಾದಗಳು ಎಂದಿದ್ದರೆ ಇವರೆಲ್ಲಾ ಸೇರುತ್ತಾರೆ.
ಗೌತಮ್ ಗಂಭೀರ್, ಸೆಹ್ವಾಗ್ ಒಂದು ಕಾಲದಲ್ಲಿ ಟೀಂ ಇಂಡಿಯಾದ ಯಶಸ್ವಿ ಆರಂಭಿಕ ಜೋಡಿ ಎನಿಸಿಕೊಂಡವರು. ಸಚಿನ್-ಗಂಗೂಲಿ ನಂತರ ಇವರೇ ಭಾರತದ ಯಶಸ್ವೀ ಆರಂಭಿಕರು. ಆದರೆ ಇವರಿಬ್ಬರ ವೃತ್ತಿ ಜೀವನ ಮೊಟಕುಗೊಳ್ಳಲು ಧೋನಿಯೇ ಕಾರಣ ಎಂಬ ಗಾಸಿಪ್ ಹರಡಿತ್ತು. ಗಂಭೀರ್ ವೃತ್ತಿಪರತೆ ಬಗ್ಗೆ ಧೋನಿ ಡ್ರೆಸ್ಸಿಂಗ್ ರೂಂನಲ್ಲಿ ಕಿಡಿ ಕಾರಿದ್ದರು. ಪಂದ್ಯವೊಂದರಲ್ಲಿ ಬೇಕೆಂದೇ ರನೌಟ್ ಆದರು ಎಂದು ಗಂಭೀರ್ ಮೇಲೆ ಧೋನಿ ಕಿಡಿ ಕಾರಿದ್ದರು.
ವೀರೇಂದ್ರ ಸೆಹ್ವಾಗ್ ರಂತಹ ಹೊಡೆ ಬಡಿಯ ಜನಪ್ರಿಯ ಆಟಗಾರನನ್ನೂ ಕೂಡಾ ಮೂಲೆಗುಂಪು ಮಾಡಿದರೆಂಬ ಕುಖ್ಯಾತಿ ಧೋನಿಯ ಹೆಗಲೇರಿತ್ತು. ಯುವರಾಜ್ ಒಂದು ಕಾಲದಲ್ಲಿ ಧೋನಿ ಅಚ್ಚುಮೆಚ್ಚಿನ ಆಟಗಾರರಾಗಿದ್ದರು. ಆದರೆ ಏಕದಿನ ವಿಶ್ವಕಪ್ ಗೆದ್ದ ಮೇಲೆ ಇವರ ಸಂಬಂಧ ಹಳಸಿತು.
ಬಹಿರಂಗವಾಗಿಯೇ ಯುವಿ ತಂಡಕ್ಕೆ ಆಯ್ಕೆಯಾಗದಿರಲು ಧೋನಿಯೇ ಕಾರಣ ಎಂದು ಯುವಿ ತಂದೆ ಯೋಗರಾಜ್ ಸಿಂಗ್ ಆರೋಪಿಸಿದ್ದರು. ಇವರೆಲ್ಲರ ಕತೆ ಹೀಗಾದರೆ, ವಿವಿಎಸ್ ಲಕ್ಷ್ಮಣ್, ತಮ್ಮ ನಿವೃತ್ತಿಯ ಸಂದರ್ಭದಲ್ಲಿ ತೀರಾ ಬೇಸರಗೊಂಡಿದ್ದರು. ಆಗ ನಾಯಕರಾಗಿದ್ದ ಧೋನಿ, ಕನಿಷ್ಠ ನಿವೃತ್ತಿಯಾಗುತ್ತಿರುವ ಈ ಹಿರಿಯ ಆಟಗಾರನ ಕರೆ ಸ್ವೀಕರಿಸುವ ಸೌಜನ್ಯವನ್ನೂ ತೋರಲಿಲ್ಲ ಎಂಬ ಗುಸು ಗುಸು ಹರಡಿತ್ತು.
ಹರ್ಭಜನ್ ಸಿಂಗ್ ಕೂಡಾ ಸಂಪೂರ್ಣ ತೆರೆ ಮರೆಗೆ ಸರಿದಿದ್ದು ಧೋನಿಯ ಕಾಲದಲ್ಲೇ. ಆಗಾಗ ಭಜಿ ಶ್ರೇಷ್ಠ ನಾಯಕ ಸೌರವ್ ಗಂಗೂಲಿ ಎನ್ನುವ ಮೂಲಕ ಧೋನಿಗೆ ಟಾಂಗ್ ಕೊಡುತ್ತಿದ್ದರು. ಆದರೆ ಗಂಗೂಲಿ ಮೇಲೆ ಕೂಡಾ ಅನಿಲ್ ಕುಂಬ್ಳೆಯಂತಹ ಹಿರಿಯ ಆಟಗಾರನನ್ನು ಕಡೆಗಣಿಸಿದ ಆರೋಪವಿತ್ತು.
ಆದರೆ ಯುವ ಆಟಗಾರರನ್ನು ಬೆಳೆಸಿದ ಖ್ಯಾತಿ ಧೋನಿಯದ್ದು. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾರಂತಹ ಆಟಗಾರರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಖ್ಯಾತಿ ಧೋನಿಯದ್ದು. ಆದರೆ ಗಂಗೂಲಿಗಿಂತ ಹೆಚ್ಚು ಹಿರಿಯ ಆಟಗಾರರನ್ನು ಮೂಲೆ ಗುಂಪು ಮಾಡಿಸಿದ ಕುಖ್ಯಾತಿ ಅವರದ್ದು. ಸೆಹ್ವಾಗ್ ನಂತಹ ಆಟಗಾರನ ಆಟ ನೋಡುವ ಅವಕಾಶ ಕಳೆದುಕೊಂಡದ್ದಕ್ಕೆ ಅಭಿಮಾನಿಗಳಿಗೆ ಧೋನಿ ಮೇಲೆ ಬೇಸರವಿರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ