ಮತ್ತದೇ ಇಂಗ್ಲೆಂಡ್ ಅಂಗಣದಲ್ಲಿ ಅದೇ ಅವಮಾನ ಅನುಭವಿಸಿದ ವಿರಾಟ್ ಕೊಹ್ಲಿ!

ಕೃಷ್ಣವೇಣಿ ಕೆ

ಶುಕ್ರವಾರ, 9 ಜೂನ್ 2017 (08:46 IST)
ಲಂಡನ್: ವಿರಾಟ್ ಕೊಹ್ಲಿ ಕ್ರೀಸ್ ಗೆ ಬಂದರೆ ಒಂದಷ್ಟು ರನ್ ಗಳಿಸಿಯೇ ಪೆವಿಲಿಯನ್ ಗೆ ಮರಳುವುದು. ಅವರು ಶೂನ್ಯಕ್ಕೆ ಔಟಾಗುವುದು ತೀರಾ ಕಡಿಮೆ. ಆದರೆ ಇಂಗ್ಲೆಂಡ್ ನೆಲದಲ್ಲಿ ಮತ್ತೊಮ್ಮೆ ಶೂನ್ಯಕ್ಕೆ ಔಟಾದಾಗ ಅವರ ನಿರಾಸೆ ಹೇಳತೀರದು.

 
2014 ರಲ್ಲಿ ಇಂಗ್ಲೆಂಡ್ ವಿರುದ್ಧ ಕಾರ್ಡಿಫ್ ನಲ್ಲಿ ಕೊಹ್ಲಿ ಏಕದಿನ ಪಂದ್ಯವೊಂದರಲ್ಲಿ ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದ್ದರು. ಇದೀಗ ಮತ್ತೊಮ್ಮೆ ಅದೇ ಆಂಗ್ಲರ ನೆಲದಲ್ಲಿ ನಿನ್ನೆಯ  ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್ ಪಡೆದಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಔಟಾಗಿರುವುದು ಅವರು ಇತ್ತೀಚೆಗೆ ನಡೆದ ಆಸ್ಟ್ರೇಲಯಾ ವಿರುದ್ಧದ ಸರಣಿಯಲ್ಲಿ. ಆದರೆ ವಿಶ್ವದ ಘಟಾನುಘಟಿ ಬ್ಯಾಟ್ಸ್ ಮನ್ ಎನಿಸಿಕೊಂಡಿರುವ ಕೊಹ್ಲಿ ಶೂನ್ಯ ಸಂಪಾದನೆಯನ್ನು ಸಹಿಸುವುದಿಲ್ಲ.

ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಶೂನ್ಯಕ್ಕೆ ಔಟಾದಾಗ ಬೌಂಡರಿ ಗೆರೆ ಬಳಿಯೇ ಸ್ವಲ್ಪ ಹೊತ್ತು ನಿಂತು ತಮ್ಮ ಹತಾಶೆ ವ್ಯಕ್ತಪಡಿಸಿದ್ದರು. ಇದೀಗ ನಿನ್ನೆಯ ಪಂದ್ಯದಲ್ಲೂ ಯಾಕೋ ಅವರಿಗೆ ಅಷ್ಟು ಬೇಗ ಔಟಾದ ನಿರಾಸೆ ಪೆವಿಲಿಯನ್ ಗೆ ಹೋದ ಮೇಲೂ ಕಾಡುತ್ತಿತ್ತು. ಅಲ್ಲಿಯೂ ಮತ್ತೆ ಮತ್ತೆ ಏನೋ ಗೊಣಗುತ್ತಾ, ಬ್ಯಾಟ್ ಬೀಸುವವರಂತೆ ಆಕ್ಷನ್ ಮಾಡುತ್ತಾ ಏಕಾಂಗಿಯಾಗಿ ಕೆಲ ಹೊತ್ತು ಕಳೆದರು.

ಹಿಂದೆ ಸಚಿನ್ ಆಟವನ್ನು ನೋಡಲು ಅಭಿಮಾನಿಗಳು ಹೇಗೆ ಕ್ರೀಡಾಂಗಣಕ್ಕೆ ಬರುತ್ತದ್ದರೋ, ಈಗ ಕೊಹ್ಲಿ ಆಟದ ಝಲಕ್ ನೋಡುವುದಕ್ಕಾಗಿಯೇ ಕ್ರಿಕೆಟ್ ವೀಕ್ಷಿಸುವವರಿದ್ದಾರೆ. ಹಾಗಾಗಿ ಅವರ ಶೂನ್ಯ ಸಂಪಾದನೆಯನ್ನು ಅರಗಿಸಿಕೊಳ್ಳುವುದು ಅಭಿಮಾನಿಗಳಿಗೂ ಕಷ್ಟವಾಗುತ್ತಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ