ಹತ್ತು ವರ್ಷದ ಹಿಂದೆ ಧೋನಿ ಮಾಡಿದ್ದ ಕೆಲಸವನ್ನು ಮಾಡಲಿದ್ದಾರೆ ಕೊಹ್ಲಿ!
ಶುಕ್ರವಾರ, 16 ಜೂನ್ 2017 (09:19 IST)
ಲಂಡನ್: ಸರಿಯಾಗಿ 10 ವರ್ಷಗಳ ಹಿಂದೆ. ಅಂದರೆ 2007 ರಲ್ಲಿ. ಧೋನಿ ಅದೇ ಮೊದಲ ಬಾರಿಗೆ ಭಾರತ ತಂಡದ ನೇತೃತ್ವ ವಹಿಸಿದ್ದರು. ಮೊದಲ ಐಸಿಸಿ ಟೂರ್ನಿಯ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ್ದರು.
ಇಂದು ಕೊಹ್ಲಿ ಕೂಡಾ ಧೋನಿಯದ್ದೇ ಹಾದಿಯಲ್ಲಿದ್ದಾರೆ. ಅದು 2007, ಇಂದು 2017 ಎಂಬುದಷ್ಟೇ ವ್ಯತ್ಯಾಸ. ಅಂದು ಧೋನಿಗೆ ನಾಯಕನಾಗಿ ಮೊದಲ ಐಸಿಸಿ ಟೂರ್ನಿಯಾಗಿತ್ತು. ಇಂದು ಕೊಹ್ಲಿಗೂ ನಾಯಕನಾಗಿ ಮೊದಲ ಐಸಿಸಿ ಟೂರ್ನಿ.
ಅಂದು ಮೊದಲ ಫೈನಲ್ ನಲ್ಲೇ ಧೋನಿ ಪಾಕಿಸ್ತಾನವನ್ನು ಎದುರಿಸಿದ್ದರು. ಇಂದು ಕೊಹ್ಲಿ ಕೂಡಾ ಪಾಕಿಸ್ತಾನವನ್ನು ಎದುರಿಸಲಿದ್ದಾರೆ. ಸರಿಯಾಗಿ 10 ವರ್ಷಗಳ ಬಳಿಕ ಭಾರತ-ಪಾಕಿಸ್ತಾನ ಐಸಿಸಿ ಟೂರ್ನಿಯ ಫೈನಲ್ ನಲ್ಲಿ ಎದುರು ಬದುರಾಗಿವೆ.
ವಿಶೇಷವೆಂದರೆ ನಾಡಿದ್ದು ಚಾಂಪಿಯನ್ಸ್ ಟ್ರೋಫಿ ಫೈನಲ್ ದಿನವೇ ಹಾಕಿಯಲ್ಲೂ ವಿಶ್ವ ಹಾಕಿ ಲೀಗ್ ನ ಸೆಮಿಫೈನಲ್ ಹಂತದಲ್ಲಿ ಭಾರತ-ಪಾಕ್ ಎದುರುಬದುರಾಗಲಿವೆ. ಇದೀಗ ಈ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಿದ್ದು, ಇಡೀ ವಿಶ್ವವೇ ಈ ಜಾಗತಿಕ ಸಮರಕ್ಕಾಗಿ ಕಾಯುತ್ತಿದೆ.
ಈಗಾಗಲೇ ಪಾಕ್ ಹಾಗೂ ಭಾರತೀಯ ಅಭಿಮಾನಿಗಳು ತಮ್ಮ ತಮ್ಮ ತಂಡವನ್ನು ಸಮರ್ಥಿಸಿಕೊಳ್ಳಲು ಓವಲ್ ಮೈದಾನದತ್ತ ಮುಖ ಮಾಡಿದ್ದಾರೆ. ಈ ಪಂದ್ಯದಕ್ಕೆ ದಾಖಲೆಯ ವೀಕ್ಷಕರನ್ನು ನಿರೀಕ್ಷಿಸಲಾಗಿದೆ.