ದುಬೈ: ಫಿಸಿಯೋಗಳು ಗಾಯದ ಕಾರಣ ನೀಡಿ ಟೀಂ ಇಂಡಿಯಾದಿಂದ ಹೊರಗಿಟ್ಟಿರುವಾಗ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುತ್ತಿರುವುದು ಹೇಗೆ? ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದರ ಬಗ್ಗೆ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮದೇ ಉದಾಹರಣೆ ಸಮೇತ ಸಮರ್ಥನೆ ನೀಡಿದ್ದಾರೆ.
2011 ರ ವಿಶ್ವಕಪ್ ಗೆ ಮೊದಲು ನನಗೆ ಭುಜದ ಗಾಯವಾಗಿತ್ತು. ವೈದ್ಯರು ಸರ್ಜರಿ ಅಗತ್ಯ ಎಂದಿದ್ದರು. ನಾನು ಡಿಸೆಂಬರ್ ನಲ್ಲಿ ಸರ್ಜರಿಗೊಳಗಾಗಬೇಕಿತ್ತು. ಇದನ್ನು ನಾನು ಕೋಚ್ ಕರ್ಸ್ಟನ್ ಮತ್ತು ಬಿಸಿಸಿಐಗೆ ತಿಳಿಸಿದ್ದೆ. ಆದರೆ ಆಗ ನಾನು ಸರ್ಜರಿಗೊಳಗಾಗಿದ್ದರೆ ವಿಶ್ವಕಪ್ ಗೆ ಆಯ್ಕೆಯಾಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಬಿಸಿಸಿಐ ವಿಶ್ವಕಪ್ ಬಳಿಕ ಸರ್ಜರಿಗೊಳಗಾಗಿ ಎಂದು ಸಲಹೆ ನೀಡಿತ್ತು. ಹಾಗಾಗಿ ನಾನು ಕೇವಲ ಟೆಸ್ಟ್ ಕ್ರಿಕೆಟ್ ಆಡಿ, ಭುಜಕ್ಕೆ ಇಂಜಕ್ಷನ್ ಪಡೆಯುತ್ತಾ ವಿಶ್ವಕಪ್ ಆಡಿ ಮುಗಿಸಿದ್ದೆ. ಬಹುಶಃ ರೋಹಿತ್ ಶರ್ಮಾ ಪ್ರಕರಣದಲ್ಲೂ ಹೀಗೇ ಆಗಿರಬೇಕು. ಐಪಿಎಲ್ ಫೈನಲ್ ಮತ್ತು ಆಸ್ಟ್ರೇಲಿಯಾ ಸರಣಿ ಮಹತ್ವದ್ದಾಗಿದ್ದರಿಂದ ಅವರನ್ನು ಈಗ ಆಡಿಸಲಿ. ಅಗತ್ಯ ಬಂದರೆ ಬದಲಿ ಆಟಗಾರನನ್ನೂ ಕರೆದುಕೊಂಡು ಹೋಗಲಿ. ಒಂದು ವೇಳೆ ಅವರು ಆಡುವಷ್ಟು ಫಿಟ್ ಆಗಿದ್ದರೆ ಮಹತ್ವದ ಸರಣಿಯಿಂದ ಅವರನ್ನು ಟೀಂ ಇಂಡಿಯಾದಿಂದ ಹೊರಗಿಡುವ ಔಚಿತ್ಯವೇನು ಎಂದು ಸೆಹ್ವಾಗ್ ಪ್ರಶ್ನಿಸಿದ್ದಾರೆ.