ಆಸ್ಪತ್ರೆಯಲ್ಲಿ ಗೇಲ್ ನರಳಾಟ; ಏನಾಯ್ತು ಕೆರಿಬಿಯನ್ ಕಿಂಗ್‌ಗೆ?

ಸೋಮವಾರ, 9 ಜನವರಿ 2017 (09:31 IST)
ಕೆರಬಿಯನ್ ಕಿಂಗ್ ಕ್ರಿಸ್ ಗೇಲ್‌ಗೆ ಏನಾಯ್ತು?  ಸದಾ ಮೋಜು ಮಸ್ತಿಯಲ್ಲಿ ಕಳೆಯುತ್ತಿದ್ದ ಸ್ಪೋಟಕ ಬ್ಯಾಟ್ಸ್‌ಮನ್ ಇದ್ದಕ್ಕಿದ್ದಂತೆ ಆಸ್ಪತ್ರೆ ಸೇರಿದ್ದೇಕೆ? ವಿಂಡಿಸ್ ಆಟಗಾರನ ಆರೋಗ್ಯದಲ್ಲೇನಾಗುತ್ತಿದೆ? 
ಹೌದು, ಭಾರತದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಕ್ರಿಸ್ ಗೇಲ್ ಆಸ್ಪತ್ರೆ ಸೇರಿದ್ದಾರೆ. ಸದಾ ಇನ್ಸ್ಟಾಗ್ರಾಮ್‌ನಲ್ಲಿ ವಿಭಿನ್ನ ಗೆಟಪ್‌ನ ಫೋಟೋ ಹಾಕಿ ಮಿಂಚುತ್ತಿದ್ದ ಗೇಲ್, ಕಳೆದ ವಾರವಷ್ಟೇ ರಂಗು ರಂಗಾಗಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ವಾರ ಗೇಲ್ ಯಾವ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅವರ ಇನ್ಸ್ಟಾಗ್ರಾಮ್‌ ನೋಡಲು ಹೋದವರಿಗೆ ಶಾಕ್. ಅದನ್ನು ನೋಡಿ ಎಲ್ಲರ ಮನಸ್ಸಿಗೆ ಬಂದ ಒಂದೇ ಒಂದು ಪ್ರಶ್ನೆ, ಅಯ್ಯೋಯ್ಯೋ ಏನಾಯ್ತು ಗೇಲ್‌ಗೆ? ಯಾಕೆ ಆಸ್ಪತ್ರೆ ಬೆಡ್ ಮೇಲೆ ಮಲಗಿ ಡ್ರಿಪ್ಸ್ ಹಾಕಿಸಿಕೊಂಡಿದ್ದಾರೆ? 
 
ಹೌದು, ಮತ್ತೀಗ ಗೇಲ್ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಡ್ರಿಪ್ಸ್ ಹಾಕಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಅವರು ಅಪ್ಲೋಡ್ ಮಾಡಿದ್ದಾರೆ.
 
ಹೊಸ ವರ್ಷದಂದು ಪತ್ನಿ ಜತೆ ಜಮೈಕಾದಲ್ಲಿ ಫುಲ್ ಎಂಜಾಯ್ ಮಾಡಿದ್ದ ಗೇಲ್ ಇವತ್ತು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಅವರಿಗೇನಾಗಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನ್ಯೂ ಇಯರ್ ಪಾರ್ಟಿಯಲ್ಲಿ ಕುಡಿದು ಕುಪ್ಪಳಿಸಿದ್ದ ಗೇಲ್‌ಗೆ ಅಂದೇ ಏನಾದ್ರೂ ಕಿರಿಕ್ ಆಯ್ತಾ ಎಂಬ ಅನುಮಾನ ಎಲ್ಲರಲ್ಲೂ ಮನೆ ಮಾಡಿದೆ. 
 
ಗೇಲ್ ಆಸ್ಪತ್ರೆ ಸೇರಿರುವ ಫೋಟೋವನ್ನು ನೋಡಿ ಮೊದಲು ಪ್ರತಿಕ್ರಿಯಿಸಿದ್ದು ಭಾರತದ ಸ್ಪೋಟಕ ಆಟಗಾರ ಸೆಹ್ವಾಗ್, 'ಗೆಲ್ ವೆಲ್ ಸೂನ್ ಯೂನಿವರ್ಸ್ ಬಾಸ್, ಏನಾಯ್ತು ನಿನಗೆ, ಬೇಗ ಗುಣಮುಖನಾಗು ಎಂದು ಅವರು ಬರೆದಿದ್ದಾರೆ. 
 
ಅದಕ್ಕೆ ಪ್ರತಿಕ್ರಿಯಿಸಿರುವ ಗೇಲ್, ನಾನು ನಿನಗೆ ಆಮೇಲೆ ವಿವರವಾಗಿ ಹೇಳುತ್ತೇನೆ, ಧನ್ಯವಾದ ಎಂದು ಪ್ರತ್ಯುತ್ತರ ಬರೆದಿದ್ದಾರೆ. 
 
ಕೆಲ ದಿನಗಳ ಹಿಂದೆ ಗೇಲ್ ಕ್ರಿಕೆಟ್ ಗೆ ವಿದಾಯ ಹೇಳೋ ಮಾತನ್ನಾಡಿದ್ದರು. ಈ ಬಾರಿ ಆಸೀಸ್ ಬಿಗ್ಬಾಷ್ ಲೀಗ್‌ನಲ್ಲೂ ಪಾಲ್ಗೊಳ್ಳದ ಅವರು ಗಾಯದ ಸಮಸ್ಯೆಯ ಕಾರಣ ನೀಡಿದ್ದರು. ಮತ್ತೀಗ ಅವರು ಆಸ್ಪತ್ರೆ ಸೇರಿರುವುದು ಗೇಲ್ ಗಂಭೀರ ಅನಾರೋಗ್ಯದಿಂದ ನರಳುತ್ತಿದ್ದಾರಾ ಎಂಬ ಆತಂಕವನ್ನು ತಂದಿಟ್ಟಿದೆ. 
 
ಒಟ್ಟಿನಲ್ಲಿ ಗೇಲ್ ಅವರನ್ನು ವಿಭಿನ್ನ ವತಾರಗಳಲ್ಲಿ ಕಣ್ತುಂಬಿ ಕೊಳ್ಳಲು ಹೋದವರಿಗೆ ಈ ಬಾರಿ ಶಾಕ್ ಆಗಿದ್ದಂತೂ ನಿಜ. ಏನೇ ಆಗಲಿ. ಗೇಲ್ ಆದಷ್ಟು ಬೇಗ ಗುಣಮುಖರಾಗಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ