ಬಿಸಿಸಿಐ ಮಾಡಿದ ತಪ್ಪಿಗೆ ಈ ಯುವಕರ ಭವಿಷ್ಯ ಹಾಳಾಯ್ತು!

ಶುಕ್ರವಾರ, 2 ಡಿಸೆಂಬರ್ 2016 (14:23 IST)
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಡಿದ ಒಂದು ತಪ್ಪಿಗೆ ಈ ಏಳು ಕ್ರಿಕೆಟಿಗರ ಭವಿಷ್ಯವೇ ಹಾಳಾಗಿದೆ. ಭಾರತದ ಕ್ಯಾಪ್ ತೊಟ್ಟು ಮೈದಾನದಲ್ಲಿ ಆಡಬೇಕೆಂಬ ಕನಸು ಕಂಡಿದ್ದ ಯುವ ಕ್ರಿಕೆಟಿಗರು ಈಗ ನಿರಾಸೆ ಅನುಭವಿಸುತ್ತಿದ್ದಾರೆ.

ಎಲ್ಲಾ ಸರಿ ಹೋಗಿದ್ದರೆ ಡಿಸೆಂಬರ್ 13 ರಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಅಂಡರ್ 19 ವಯೋಮಿತಿಯವರ ಯೂಥ್ ಏಷ್ಯಾ ಕಪ್ ನಲ್ಲಿ ಇವರು ಆಡಬೇಕಾಗಿತ್ತು. ಅದರ ಪೂರ್ವಭಾವಿಯಾಗಿ ಬೆಂಗಳೂರಿನಲ್ಲಿ ನಡೆದ ಸಿದ್ಧತಾ ಶಿಬಿರಕ್ಕೂ ಇವರೆಲ್ಲಾ ಹಾಜರಾಗಿದ್ದರು. ಶ್ರೀಲಂಕಾಗೆ ಹೋಗಲು ವೀಸಾ ಪಾಸ್ ಪೋರ್ಟ್ ಎಲ್ಲಾ ರೆಡಿ ಮಾಡಿಕೊಂಡಿದ್ದರು.

ಆದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕೂಟದಲ್ಲಿ ಆಡುವ ಆಟಗಾರರ ಕನಿಷ್ಠ ವಯೋಮಿತಿ 1-9- 1998 ಕ್ಕೆ ಅನ್ವಯವಾಗುವಂತೆ ಇರಬೇಕೆಂದು ತಿಳಿಸಿತ್ತು. ಆದರೆ ಇದನ್ನು ತಪ್ಪಾಗಿ ಗ್ರಹಿಸಿದ್ದ ಬಿಸಿಸಿಐ ಅಧಿಕಾರಿಗಳು 1998 ರ ಬದಲು 1997 ಎಂದು ಪರಿಗಣಿಸಿದ್ದರು. ಈ ಹಿನ್ನಲೆಯಲ್ಲಿ ಈ ಆಟಗಾರರನ್ನು ಆಯ್ಕೆ ಮಾಡಿದ್ದರು.

ನಂತರ ತಮ್ಮ ತಪ್ಪು ಗೊತ್ತಾದ ಮೇಲೆ ಬಿಸಿಸಿಐ ಅಧಿಕಾರಿಗಳು ಇದ್ದಕ್ಕಿದ್ದಂತೆ ಈ ಯುವ ಕ್ರಿಕೆಟಿಗರಿಗೆ ನೀವು ಶ್ರೀಲಂಕಾಗೆ ಹೋಗಲು ಸಾಧ್ಯವಿಲ್ಲ ಎಂದಿದೆ. ಕನಿಷ್ಠ ತನ್ನಿಂದಾದ ಪ್ರಮಾದಕ್ಕೆ ಕ್ಷಮೆಯನ್ನೂ ಕೇಳುವ ಗೋಜಿಗೆ ಹೋಗಲಿಲ್ಲ. ಬದಲಿಗೆ ತನ್ನ ವೆಬ್ ಸೈಟ್ ನಲ್ಲಿ ಬದಲಿ ಆಟಗಾರರ ಹೆಸರು ಪ್ರಕಟಿಸಿ ಕೈ ತೊಳೆದುಕೊಂಡಿದೆ.

ಉತ್ತರ ಪ್ರದೇಶದ ಸಂದೀಪ್ ತೋಮರ್, ಹಿಮಾಚಲ ಪ್ರದೇಶದ ದಿಗ್ವಿಜಯ್ ರಾಂಗಿ, ಕೇರಳದ ಡೆರಿಲ್ ಎಸ್ ಫೆರಾರಿಯೊ, ಪಂಜಾಬ್ ನ ರಿಷಬ್ ಭಗತ್, ದೆಹಲಿಯ ಸಿಮರ್ಜಿತ್ ಸಿಂಗ್, ಮಹಾರಾಷ್ಟ್ರದ ಇಝಾನ್ ಸೈಯದ್ ಮತ್ತು ಹೈದಾರಾಬಾದ್ ನ ಚಂದನ್ ಸಾಹ್ನಿ ಈ ನೊಂದ ಕ್ರಿಕೆಟಿಗರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ