ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಜಹೀರ್ ಬೈ ಬೈ!

ಗುರುವಾರ, 15 ಅಕ್ಟೋಬರ್ 2015 (11:37 IST)
ಭಾರತ ಕಂಡ ಮಹಾನ್ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡಿರುವ ಎಡಗೈ ವೇಗದ ಬೌಲರ್ ಜಹೀರ್ ಖಾನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಹೇಳಲಿದ್ದಾರೆ. 

ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ತಮ್ಮ ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
 
"ಇಂದು ಜಹೀರ್ ತಮ್ಮ ನಿವೃತ್ತಿಯನ್ನು ಘೋಷಿಸಲಿದ್ದಾರೆ. ಅವರ ನಿವೃತ್ತಿ ಜೀವನಕ್ಕೆ ನನ್ನ ಶುಭ ಹಾರೈಕೆಗಳು. ಅವರು ಐಪಿಎಲ್‌ನಲ್ಲಿ ಆಟವಾಡುವುದನ್ನು ಮುಂದುವರೆಸುತ್ತಾರೆ ಎಂದು ನಾನು ನಂಬಿರುತ್ತೇನೆ", ಎಂದು ಶುಕ್ಲಾ ಟ್ವೀಟ್ ಮಾಡಿದ್ದಾರೆ.
 
ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿರುವ ಜಹೀರ್ ಅಕ್ಟೋಬರ್ 3, 2,000 ನೇ ವರ್ಷದಲ್ಲಿ ಕೀನ್ಯಾದ ವಿರುದ್ಧ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಬದುಕನ್ನು ಪ್ರಾರಂಭಿಸಿದ್ದರು. ಅಂದು 10 ಓವರ್‌ಗಳಲ್ಲಿ 48 ರನ್ ನೀಡಿ 3 ವಿಕೆಟ್ ಕಬಳಿಸಿ ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದ ಅವರು ಅದೇ ವರ್ಷ ಢಾಕಾದಲ್ಲಿ  ಬಾಂಗ್ಲಾ ವಿರುದ್ಧ ತಮ್ಮ ಪ್ರಥಮ ಟೆಸ್ಟ್ ಪಂದ್ಯವನ್ನಾಡಿದ್ದರು.
 
2011ರ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 37ರ ವಯಸ್ಸಿನ ಜಹೀರ್ ಖಾನ್ 92 ಟೆಸ್ಟ್ ಪಂದ್ಯಗಳನ್ನಾಡಿದ್ದು 311 ವಿಕೆಟ್ ಪಡೆದಿದ್ದರು. ಜತೆಗೆ 200 ಏಕದಿನ ಪಂದ್ಯಗಳನ್ನಾಡಿ 284 ವಿಕೆಟ್ ಪಡೆದುಕೊಂಡಿದ್ದಾರೆ. 
 
2012ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಕೊನೆಯ ಟಿ20 ಪಂದ್ಯವನ್ನಾಡಿದ್ದ ಅವರು ಅದೇ ವರ್ಷ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಿದ್ದರು. ಆದರೆ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು.

ವೆಬ್ದುನಿಯಾವನ್ನು ಓದಿ