ಬೆಂಗಳೂರು: ಇನ್ನೇನು ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ನಡುವೆ ರಾಜ್ಯ ರಾಜಧಾನಿ ಜನತೆಗೆ ಬಿಬಿಎಂಪಿ ಗಣೇಶನ ಕೂರಿಸಲು ಹೊಸ ಷರತ್ತು ವಿಧಿಸಿದೆ.
ಗಣೇಶ ಹಬ್ಬಕ್ಕೆ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ. ಕೊರೋನಾ ಸಂದರ್ಭದಲ್ಲಿ ಮಾತ್ರ ಗಣೇಶನ ಮೂರ್ತಿಯನ್ನು ಸಾರ್ವಜನಿಕವಾಗಿ ಇಡಲು ಕೆಲವೊಂದು ನಿರ್ಬಂಧ ಹೇರಲಾಗಿತ್ತು. ಇದೀಗ ಈ ಬಾರಿ ಬಿಬಿಎಂಪಿ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.
ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮೂರ್ತಿ ಕೂರಿಸಲು ಅವಕಾಶವಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಗರ ಪೊಲೀಸರ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಅವರು ಕೆಲವು ನಿಯಮಗಳನ್ನು ತಿಳಿಸಿದ್ದಾರೆ.
ಈ ಬಾರಿ ಗಣೇಶನ ಮೂರ್ತಿಯನ್ನು ಬೇಕಾಬಿಟ್ಟಿ ಕೂರಿಸುವಂತಿಲ್ಲ. ಗಣೇಶನ ಕೂರಿಸಲು ಅನುಮತಿ ಪಡೆಯಬೇಕು. ಇದಕ್ಕಾಗಿ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಸೇರಿದಂತೆ ವಿವಿಧ ಅಧಿಕಾರಿಗಳ ಸಮಿತಿ ರಚಿಸಿ ಅಲ್ಲಲ್ಲಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುವುದು. ಈ ಕೇಂದ್ರದಲ್ಲಿ ಸಾರ್ವಜನಿಕರು ಗಣೇಶನ ಮೂರ್ತಿ ಕೂರಿಸಲು ಅನುಮತಿ ಪಡೆಯಬೇಕು.
ರಸ್ತೆ ಮಧ್ಯದಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವಂತೆ ಗಣೇಶನ ಮೂರ್ತಿ ಕೂರಿಸುವಂತಿಲ್ಲ. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಇನ್ನಷ್ಟು ಮಾರ್ಗಸೂಚಿಗಳನ್ನು ಸದ್ಯದಲ್ಲೇ ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ.