ಹಿಂದೊಂದು ಮಾತಿತ್ತು. ಹೃದಯ ಸಮಸ್ಯೆ ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳಲ್ಲೇ ಬೇಗ ಕಂಡುಬರುತ್ತದೆ ಎಂದು. ಆದರೆ ಈಗ ಹೆಣ್ಣು ಮಕ್ಕಳಲ್ಲೂ ಚಿಕ್ಕವಯಸ್ಸಿನಲ್ಲೇ ಹೃದಯಾಘಾತ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೇನೆಂದು ಡಾ ಸಿಎನ್ ಮಂಜುನಾಥ್ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಇತ್ತೀಚೆಗೆ ವಿವರಿಸಿದ್ದರು.
ಹೆಣ್ಣು ಮಕ್ಕಳಲ್ಲಿ ಋತುಚಕ್ರವಾಗುವುದರಿಂದ ಕೆಲವು ಗಂಭೀರ ಆರೋಗ್ಯ ಸಮಸ್ಯೆ ಬರುವ ಸಂಭವ ಕಡಿಮೆಯಾಗಿತ್ತು. ಮೋನೋಪಾಸ್ ಅಂದರೆ ಮುಟ್ಟುನಿಂತ ಬಳಿಕವಷ್ಟೇ ಮಹಿಳೆಯರಲ್ಲಿ ಹೃದಯದ ಸಮಸ್ಯೆ ಕಂಡುಬರುತ್ತಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಹಿಳೆಯರಲ್ಲೇ ಹೃದಯದ ಸಮಸ್ಯೆ ಕಂಡುಬರುತ್ತಿದೆ.
ಇದಕ್ಕೆ ಮುಖ್ಯ ಕಾರಣ ಒತ್ತಡ. ಹಿಂದಿನ ಕಾಲದಲ್ಲಿ ಮಹಿಳೆಯರು ಹೊರಗೆ ಹೋಗಿ ದುಡಿಯುವುದು, ಅತಿಯಾದ ಒತ್ತಡ ಅನುಭವಿಸುವುದು ಇರಲಿಲ್ಲ. ಆದರೆ ಈಗ ಮಹಿಳೆಯರು ಮನೆ ಒಳಗಿನ ಕೆಲಸ ಮತ್ತು ಹೊರಗೆ ಹೋಗಿ ದುಡಿಯುವುದರಿಂದ ಹೆಚ್ಚು ಒತ್ತಡಕ್ಕೊಳಗಾಗುತ್ತಿದ್ದಾರೆ. ಇನ್ನು, ಮಕ್ಕಳ ವಿಚಾರದಲ್ಲೂ ಅವರಿಗೆ ಜವಾಬ್ಧಾರಿಗಳು ಹೆಚ್ಚಾಗಿವೆ. ಮಕ್ಕಳಿಗೆ ಪರೀಕ್ಷೆ ಎಂದರೆ ತಾಯಂದಿರಿಗೇ ಪರೀಕ್ಷೆ ಎನ್ನುವಷ್ಟು ಒತ್ತಡವಿರುತ್ತದೆ. ಇನ್ನು ಕೆಲವರಿಗೆ ಬೇಗನೇ ಮುಟ್ಟು ನಿಲ್ಲುವ ಪ್ರಕ್ರಿಯೆ ಕಂಡುಬರುತ್ತಿದೆ. ಈ ಎಲ್ಲಾ ಕಾರಣಗಳಿಂದಲೇ ಮಹಿಳೆಯರಲ್ಲೂ ಚಿಕ್ಕವಯಸ್ಸಿನಲ್ಲೇ ಒತ್ತಡದಿಂದ ಬರುವಂತಹ ಆರೋಗ್ಯ ಸಮಸ್ಯೆಗಳು ಬರುತ್ತಿವೆ. ಅದರಲ್ಲಿ ಹೃದಯಾಘಾತವೂ ಒಂದು ಎಂದು ಡಾ ಸಿಎನ್ ಮಂಜುನಾಥ್ ಹೇಳಿದ್ದರು.