ಉಕದಲ್ಲಿ ಜೆಡಿಎಸ್ ಗೆ ಮಹದಾಯಿಯೇ ಪ್ರಬಲ ಅಸ್ತ್ರ!

ಶುಕ್ರವಾರ, 21 ಅಕ್ಟೋಬರ್ 2016 (09:05 IST)
ಬೆಂಗಳೂರು: ಮಹದಾಯಿ ಸಮಸ್ಯೆಯನ್ನು ನ್ಯಾಯಾಧಿಕರಣದ ಹೊರಗೆ ಇತ್ಯರ್ಥ ಪಡಿಸಿಕೊಳ್ಳಲು ಇಂದು ಮುಂಬೈನಲ್ಲಿ ನಡೆಯಬೇಕಿದ್ದ ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿ ಸಭೆ ಮುಂದೂಡಿದ್ದು, ರೈತ ಹೋರಾಟಗಾರರಿಗೆ ಹಾಗೂ ಮಲಪ್ರಭೆಯ ಅಚ್ಚುಕಟ್ಟು ಪ್ರದೇಶದ ವಾಸಿಗಳ ಆಕ್ರೋಶಕ್ಕೆ ಕಾರಣವಾಗಿರಬಹುದು. ಆದರೆ, ಅದರ ಲಾಭದ ಮೂಟೆ ಮಾತ್ರ ಅಕ್ಷರಶಃ ಜೆಡಿಎಸ್ ಮನೆ ಬಾಗಿಲಿಗೆ ಬಂದು ಬಿದ್ದಿದೆ.


 
ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಬೆಳವಣಿಗೆಯನ್ನು ವಿಶ್ಲೇಷಿಸುವುದಾದರೆ, ಜೆಡಿಎಸ್ ಗೆ ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣೆಗೆ ಇರುವ ಪ್ರಬಲ ಅಸ್ತ್ರವೆಂದರೆ ನೆನಗುದಿಗೆ ಬಿದ್ದಿರುವ ಮಹದಾಯಿ ಯೋಜನೆಯೊಂದೇ. ಈ ಯೋಜನೆ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ಸುತ್ತಲಿನ ಮೂರು ಜಿಲ್ಲೆಗಳಿಗೆ ಸಂಬಂಧಿಸಿದ್ದಾದರೂ, ಸಮಗ್ರ ಉತ್ತರ ಕರ್ನಾಟಕ ಭಾಗದ ಸಮಸ್ಯೆಯಾಗಿ ಬಿಂಬಿತವಾಗಿದೆ. ಕಳೆದ ನಲವತ್ತು ವರ್ಷಗಳಿಂದಲೂ ಈ ಸಮಸ್ಯೆ ಜೀವಂತಿಕೆಯನ್ನು ಪಡೆದುಕೊಂಡು ಬಂದಿದ್ದು ಘೋರ ದುರಂತರವೇ. ಆದಾಗ್ಯೂ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಯ ರಾಜಕೀಯ ನೇತರಾರರಿಗೆ ಇದು ಚುನಾವಣೆಯ ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ನೆಲೆಯೂರಬೇಕೆಂದು ಕನಸು ಕಂಡಿರುವ ಜೆಡಿಎಸ್ ಗೂ ಮಹದಾಯಿ ಚುನಾವಣಾ ದಾಳವಾಗಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಂಬೋಣ.
 
ಈ ಲೆಕ್ಕಾಚಾರದ ಮೇರೆಗೆ ಇಂದು ನಡೆಯಬೇಕಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮುಂದೂಡಿದ್ದು, ಜೆಡಿಎಸ್ ಗೆ ಒಂದರ್ಥದಲ್ಲಿ ಲಾಭವೆಂದೇ ಹೇಳಬಹುದು. ಒಂದು ವೇಳೆ ಸಭೆ ನಡೆದು, ಏನಾದರೂ ತಾತ್ಕಾಲಿಕ ಪರಿಹಾರ ದೊರೆತಿತೆಂದರೆ ನಲವತ್ತು ವರ್ಷದ ಮಹದಾಯಿ ಹೋರಾಟಕ್ಕೆ ಬ್ರೇಕ್ ಬೀಳುತ್ತಿತ್ತು. ಸಮಸ್ಯೆಗೆ ಪರಿಹಾರ ದೊರೆತ ಮೇಲೆ ರೈತರು, ಸಾರ್ವಜನಿಕರು ಸಹ ಸಮಾಧಾನದ ನಿಟ್ಟುಸಿರು ಬಿಟ್ಟು ಯೋಜನೆ ಅನುಷ್ಟಾನದ ದಿನ ಎದುರು ನೋಡುತ್ತಿದ್ದರು. ಆಗ ಜೆಡಿಎಸ್ ಗೆ ಇದ್ದ ಅಸ್ತ್ರವೊಂದು ಸಹ ಕೈ ತಪ್ಪಿ ಹೋಗುತ್ತಿತ್ತು. ಸಭೆ ಮುಂದೂಡಲಾಗಿದೆ ಎಂದು ಜೆಡಿಎಸ್ ಬಾಹ್ಯವಾಗಿ ಧ್ವನಿ ಎತ್ತಿದರೂ, ಆಂತರಿಕವಾಗಿ ಮುಂದಿನ ಲೆಕ್ಕಾಚಾರವನ್ನು ಹಾಕುತ್ತಿದೆ.
 
ಮಹದಾಯಿ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡ ಜೆಡಿಎಸ್ ಶಾಸಕ ಎನ್.ಎಚ್. ಕೋನರೆಡ್ಡಿ, ನವಲಗುಂದ ಹಾಗೂ ನರಗುಂದ ಭಾಗದಲ್ಲಿ ಕಳೆದ ಒಂದುವರೆ ವರ್ಷಗಳಿಂದ ಮಹದಾಯಿ ಹೋರಾಟವನ್ನು ಜೀವಂತವಾಗಿಟ್ಟುಕೊಂಡು ಬಂದಿದ್ದಾರೆ. ಒಂದಿಲ್ಲೊಂದು ಪ್ರತಿಭಟನೆ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಎಚ್ಚರಿಸುತ್ತಿದ್ದಾರೆ. ಅಲ್ಲದೆ, ಸರಕಾರ  ಮಹದಾಯಿ ವಿಷಯವಾಗಿ ರೈತರಿಗೆ ಹೇಗೆಲ್ಲ ಮೋಸ ಮಾಡುತ್ತಿದೆ ಎಂದು ಜನರಲ್ಲಿ ಎಳೆಎಳೆಯಾಗಿ ತಿಳಿಸಿಕೊಡುತ್ತಿದ್ದಾರೆ. ಈ ಪ್ರಕ್ರಿಯೆ ಮುಂಬರುವ ವಿಧಾನಸಭಾ ಚುನಾವಣೆ ವರೆಗೂ ನಿರಂತರವಾಗಿ ನಡೆಯಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಒಟ್ಟಾರೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ನೆಲೆಯೂರಬೇಕೆಂದರೆ ಮಹದಾಯಿ ಸಮಸ್ಯೆ ಜೀವಂತವಾಗಿರಲೇಬೇಕು ಎನ್ನುವ ವಿಶ್ಲೇಷಕರ ರಾಜಕೀಯ ಲೆಕ್ಕಾಚಾರವೂ ಅದನ್ನೇ ಹೇಳುತ್ತದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ