ಲೋಕಸಭೆ ಚುನಾವಣೆಯಲ್ಲಿ ನಡೆದ ಮತಗಳ್ಳತನದ ತನಿಖೆ ನಡೆಸುತ್ತೇವೆ: ಸಿದ್ದರಾಮಯ್ಯ

Krishnaveni K

ಶನಿವಾರ, 9 ಆಗಸ್ಟ್ 2025 (17:28 IST)
ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಕಾನೂನು ಇಲಾಖೆ ಪರಿಶೀಲನೆ ನಡೆಸಲಿದೆ. ಅವರು ನೀಡುವ ಶಿಫಾರಸ್ಸಿನ ಅನ್ವಯ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮತಗಳ್ಳತನವಾಗಿದೆ ಎಂದು ಆರೋಪಿಸಿ ನಿನ್ನೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವಿಚಾರವಾಗಿ ಕಾಂಗ್ರೆಸ್ ಬೃಹತ್ ಮಟ್ಟದ ಹೋರಾಟಕ್ಕೆ ಸಿದ್ಧವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಬಿಬಿಎಂಪಿ ಚುನಾವಣೆ ಮುನ್ನ ಇದನ್ನು ಪರಿಶೀಲಿಸಲಾಗುವುದು. ಪರಿಶೀಲನಾ ಕಾರ್ಯವನ್ನು ತ್ವರಿತವಾಗಿ ನಡೆಸಿ ವರದಿ ನೀಡಲು ಅಡ್ವೊಕೇಟ್ ಜನರಲ್ ಅವರಿಗೆ ಸೂಚನೆಯನ್ನು ಕೂಡ ನೀಡಲಾಗುವುದು. ಮತದಾರರ ಪಟ್ಟಿಯ ವಿಚಾರದಲ್ಲಿ ಸಂಪೂರ್ಣ ಅಧಿಕಾರವಿರುವುದು ಚುನಾವಣಾ ಆಯೋಗಕ್ಕೆ.

ಬಿಜೆಪಿಯವರು ತಪ್ಪು ಮಾಡಿ ಸುಳ್ಳು ಹೇಳುತ್ತಿದ್ದಾರೆ. ನಾವು ಕಳೆದ ಲೋಕಸಭಾ ಚುನಾವಣೆಯಲ್ಲಿ ಹದಿನಾರು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಆಂತರಿಕ ಸಮೀಕ್ಷೆ ತಿಳಿಸಿತ್ತು, ಆದರೆ ನಾವು ಗೆದ್ದದ್ದು 9 ಸ್ಥಾನಗಳನ್ನು ಮಾತ್ರ. ರಾಹುಲ್ ಗಾಂಧಿ ಅವರು ಸಾಕ್ಷಿ ಸಮೇತ ವಿಚಾರಗಳನ್ನು ತಿಳಿಸಿದ್ದಾರೆ. ಈ ಎಲ್ಲವೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗದ ಬಳಿ ಲಭ್ಯವಿದೆ. ದಾಖಲೆಗಳ ಸಹಿತ ಅವರು ಪ್ರಸ್ತಾಪ ಮಾಡಿದ್ದಾರೆ. ಒಂದೇ ಸಣ್ಣ ಕೊಠಡಿಯಲ್ಲಿ 80 ಜನ ವಾಸ ಮಾಡಲು ಸಾಧ್ಯವೇ? ನಾವು ಈ ಬಗ್ಗೆ ಅಧ್ಯಯನ ಮಾಡಿದ ನಂತರ ವಿಷಯ ತಿಳಿದಿದೆ.

ಚುನಾವಣಾ ಆಯೋಗದ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸಲು ಮತಗಳ್ಳತನದ ಬಗ್ಗೆ ನ್ಯಾಯಾಂಗ ಸ್ವಯಂ ಪ್ರೇರಿತವಾಗಿ ಮಧ್ಯಪ್ರವೇಶ ಮಾಡುವುದು ಉತ್ತಮ. ಚುನಾವಣೆಗಳಲ್ಲಿ, ಇವಿಎಂಗಳಲ್ಲಿ, ಮತದಾರರ ಪಟ್ಟಿಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ನನ್ನ ಪ್ರಕಾರ ರಾಹುಲ್ ಗಾಂಧಿಯವರು ಮಾಧ್ಯಮಗಳಲ್ಲಿ ಪ್ರದರ್ಶನ ಮಾಡಿದ್ದು ಶತಪ್ರತಿಶತ ನಿಜ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ