ಭಾಜಪದಲ್ಲಿ ಬಂಡಾಯ: ಶಕುಂತಲಾ ಶೆಟ್ಟಿ ಉಚ್ಚಾಟನೆ

ಶನಿವಾರ, 3 ಮೇ 2008 (10:36 IST)
ಪಕ್ಷದ ವರಿಷ್ಠರ ನಿರ್ಧಾರಕ್ಕೆ ವಿರುದ್ಧವಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸೇರಿದಂತೆ ಐದು ಮಂದಿಯನ್ನು ಬಿಜೆಪಿ, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಜಯಗಳಿಸಿದ ಶಕುಂತಲಾ ಶೆಟ್ಟಿಯವರಿಗೆ ಬಿಜೆಪಿ, ಈ ಬಾರಿ ಪಕ್ಷದ ಟಿಕೆಟ್ ನೀಡಲಿಲ್ಲ. ಬದಲಾಗಿ ಮಲ್ಲಿಕಾ ಪ್ರಸಾದ್ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಸಿಟ್ಟುಗೊಂಡ ಶಕುಂತಳಾ ಶೇಟ್ಟಿ ಬಂಡಾಯ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿದ್ದಾರೆ.

ಪಕ್ಷದ ಉಚ್ಚಾಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಕುಂತಲಾ ಶೆಟ್ಟಿ, ಬಿಜೆಪಿ ನನ್ನನ್ನು ಪಕ್ಷದ ಸದಸ್ಯತ್ವದಿಂದ ಉಚ್ಛಾಟಿಸಿರಬಹುದು. ಆದರೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದೇನೆ. ಅಲ್ಲಿಂದ ನನ್ನನ್ನು ಉಚ್ಛಾಟಿಸಲು ಬಿಜೆಪಿಗೆ ಸಾಧ್ಯವಿಲ್ಲ.ಈ ಬಾರಿ ಪುತ್ತೂರಿನ ಜನತೆ ನನ್ನನ್ನು ಗೆಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ.

ತಮಗೆ ಸದಾನಂದಗೌಡ ಸೇರಿದಂತೆ ಯಾರೊಂದಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ಕಾರ್ಯಕರ್ತರ ಸಂಪೂರ್ಣ ಬೆಂಬಲವಿದೆ ತಮಗಿದೆ ಎಂದರು. ಶಕುಂತಲಾ ಶೆಟ್ಟಿ ಅವರೊಂದಿಗೆ ಮಂಡ್ಯದ ಆಲೊ ಬೋಹ್ರಾ, ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಶಿವರಾಜ್ ತಂಗಡಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ಬನಾರಿ ಗೋಪಾಲಕೃಷ್ಣ ಭಟ್, ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್ ರೈಯವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಿದೆ.

ವೆಬ್ದುನಿಯಾವನ್ನು ಓದಿ